Slide
previous arrow
next arrow

ಹಿರಿಯ ನಟ ಬ್ಯಾಂಕ್ ಜನಾರ್ದನ್‌ಗೆ ಹೃದಯಾಘಾತ…!

300x250 AD

ಬೆಂಗಳೂರು: ಹಿರಿಯ ನಟ, ಹಾಸ್ಯ ಕಲಾವಿದ ಬ್ಯಾಂಕ್ ಜನಾರ್ದನ್‌ ಅವರಿಗೆ ಹೃದಯಾಘಾತ ಆಗಿದೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ. ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ. ಆದರೆ, ಅವರಿಗೆ ಹೃದಯಾಘಾತ ಆಗಿಲ್ಲ ಎಂದು ಪುತ್ರ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.

ಮಣಿಪಾಲ್ ಆಸ್ಪತ್ರೆಯಲ್ಲಿ ಬ್ಯಾಂಕ್‌ ಜನಾರ್ದನ್‌ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಐಸಿಯುಗೆ ದಾಖಲು ಮಾಡಲಾಗಿದೆ. ಹೃದಯಾಘಾತ ಆಗಿದೆ ಎಂಬ ಸುದ್ದಿ ಎಲ್ಲ ಕಡೆ ಹರಿದಾಡುತ್ತಿದೆ. ಆದರೆ, ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನಡೆಯುತ್ತಿದೆ ಅಷ್ಟೇ. ಅವರಿಗೆ ಹಾರ್ಟ್‌ ಅಟ್ಯಾಕ್‌ ಆಗಿಲ್ಲ ಎಂದು ಅವರ ಪುತ್ರ ಪ್ರತಿಕ್ರಿಯೆ ನೀಡಿದ್ದಾರೆ.

ಬ್ಯಾಂಕ್ ಜನಾರ್ದನ್ ಅವರಿಗೆ 74 ವರ್ಷ ವಯಸ್ಸಾಗಿದೆ. ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಅವರು ಈವರೆಗೆ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ನಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಾಸ್ಯ ಸೇರಿದಂತೆ ಗಂಭೀರ ಪಾತ್ರಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದು, ನಟನೆಗೆ ಜೀವ ತುಂಬುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.

ಕನ್ನಡ ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಜನಾರ್ದನ್‌, ತಮ್ಮದೇ ಆದ ಅಭಿಮಾನಿ ವರ್ಗವನ್ನು ಕಲೆಹಾಕಿದ್ದರು.

ನಾಳೆ ಆಂಜಿಯೋಗ್ರಾಮ್?

ಸದ್ಯ ನಟ ಬ್ಯಾಂಕ್​ ಜನಾರ್ದನ್​ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಬುಧವಾರ ಅವರಿಗೆ ಆಂಜಿಯೋಗ್ರಾಮ್ ಮಾಡುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಜನಾರ್ದನ್ ಅವರನ್ನು ನೋಡಲು ಯಾರಿಗೂ ಅನುಮತಿ ನೀಡುತ್ತಿಲ್ಲ.

ಬಹುತೇಕ ಸ್ಟಾರ್ ನಟರ ಜತೆ ನಟನೆ

ಗೌರಿ ಗಣೇಶ, ಕೌರವ, ರಂಗ ಎಸ್.ಎಸ್.ಎಲ್.ಸಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಅಲ್ಲದೆ, ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರ ಜತೆ ಇವರು ನಟನೆ ಮಾಡಿದ ಖ್ಯಾತಿಯನ್ನು ಹೊಂದಿದ್ದಾರೆ.

300x250 AD

ಉತ್ತಮ ಹಾಸ್ಯ ನಟ

ಬ್ಯಾಂಕ್‌ ಜನಾರ್ದನ್‌ ಕನ್ನಡ ಸಿನಿಮಾ ರಂಗದ ಮಟ್ಟಿಗೆ ಒಬ್ಬ ಅತ್ಯುತ್ತಮ ಹಾಸ್ಯ ನಟರಾಗಿದ್ದಾರೆ. ಸಹಜ ನಟನೆ ಮೂಲಕ ಗಮನ ಸೆಳೆಯುವ ಇವರು, ತಮ್ಮ ಹಾವ-ಭಾವ ಹಾಗೂ ಮಾತಿನ ಮೂಲಕ ಹಾಸ್ಯವನ್ನು ಹಂಚುತ್ತಿದ್ದರು. ಉಪೇಂದ್ರ ನಿರ್ದೇಶನದ ಶ್‌! ಸಿನಿಮಾದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಮಾಡಿದ ಇವರ ನಟನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇದಲ್ಲದೆ ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ , ಗಣೇಶ ಸುಬ್ರಹ್ಮಣ್ಯ, ಕೌರವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ತಮ್ಮ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.

ಧಾರಾವಾಹಿಯಲ್ಲೂ ನಟನೆ

ಸಿನಿಮಾಗಳ ಜತೆ ಜತೆಯಲ್ಲಿ ಧಾರಾವಾಹಿಗಳಲ್ಲಿಯೂ ಬಣ್ಣ ಹಚ್ಚಿದ್ದ ಬ್ಯಾಂಕ್‌ ಜನಾರ್ದನ್‌ ಅಲ್ಲಿಯೂ ನಗಿಸುವ ಪ್ರಯತ್ನವನ್ನು ಮುಂದುವರಿಸಿದ್ದರು.​ ಪಾಪ ಪಾಂಡು, ಮಾಂಗಲ್ಯ, ರೋಬೋ ಫ್ಯಾಮಿಲಿ, ಜೋಕಾಲಿ ಧಾರಾವಾಹಿಗಳಲ್ಲಿ ನಟಿಸಿ ಮನೆ ಮನೆ ಮಾತಾಗಿದ್ದಾರೆ.

ಶೀಘ್ರ ಗುಣಮುಖರಾಗುವಂತೆ ಪ್ರಾರ್ಥನೆ

ಈಗ ಬ್ಯಾಂಕ್‌ ಜನಾರ್ದನ್‌ ಅವರು ಶೀಘ್ರ ಗುಣಮುಖರಾಗಲಿ ಎಂದು ಕನ್ನಡ ಕಲಾವಿದರು, ಸಿನಿಮಾ ಅಭಿಮಾನಿಗಳು ಕೋರಿಕೊಂಡಿದ್ದಾರೆ.

Share This
300x250 AD
300x250 AD
300x250 AD
Back to top