ಶಿರಸಿ: ಪ್ರಯಾಣಿಕರ ಬಹು ದಿನಗಳ ಬೇಡಿಕೆಯಾದ ಸಿದ್ದಾಪುರದಿಂದ ಮಂಗಳೂರಿಗೆ ಹಾಗೂ ಯಲ್ಲಾಪುರದಿಂದ ಧರ್ಮಸ್ಥಳಕ್ಕೆ ತೆರಳುವ ನೂತನ ತಂತ್ರಜ್ಞಾನವುಳ್ಳ ಬಿಎಸ್-6 ಮಾದರಿಯ ಪರಿಸರ ಸ್ನೇಹಿ ಬಸ್‌ಗೆ ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸಿದ್ದಾಪುರ ಭಾಗದ ಜನತೆಯ ಬಹುದಿನಗಳ ಬೇಡಿಕೆ ಇಂದು ಈಡೇರಿದೆ. ಅದೇ ರೀತಿಯಾಗಿ ಯಲ್ಲಾಪುರದಿಂದ ಮಂಗಳೂರು-ಧರ್ಮಸ್ಥಳಕ್ಕೆ ತೆರಳುವ ನೂತನ ಬಸ್‌ಗೂ ಚಾಲನೆ ನೀಡಿದ್ದೇವೆ. ಈ ಎರಡೂ ಬಸ್‌ಗಳು ನೂತನ ತಂತ್ರಜ್ಞಾನವುಳ್ಳ ಬಿಎಸ್-6 ಮಾದರಿಯ ಪರಿಸರ ಸ್ನೇಹಿ ಬಸ್‌ಗಳಾಗಿವೆ. ಅಲ್ಲದೇ ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕಲು ಎಂದರು.
ಶಿರಸಿ ಹಳೆ ಬಸ್ ನಿಲ್ದಾಣದ ಕಾಮಗಾರಿ ತೀವ್ರಗತಿಯಲ್ಲಿ ಸಾಗುತ್ತಿದ್ದು, ಅರ್ಧ ಕಾರ್ಯ ಮುಗಿದಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಭೇಟಿಯಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ವಿನಂತಿಸಿದ್ದೇನೆ. ಅವರು ಸಕಾರಾತ್ಮಕ ಭರವಸೆ ನೀಡಿದ್ದಾರೆ. ಅಲ್ಲದೇ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿ, ಅನೇಕ ಬಡವರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದ ಅವರು, ನೂತನ ನಿಲ್ದಾಣದ ಕಾಮಗಾರಿ ಕೆಲವೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಶಿರಸಿ ಮಾರಿಕಾಂಬಾ ಜಾತ್ರಾ ಪ್ರಯುಕ್ತ 50 ಬಸ್‌ಗಳನ್ನು ನೀಡುವಂತೆ ವಾ.ಕ.ರ.ಸಾ.ಸಂಸ್ಥೆಯ ಉತ್ತರ ಕನ್ನಡ ವಿಭಾಗದ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಪ್ರಯಾಣಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಕ್ತಾರ ದೀಪಕ ದೊಡ್ಡೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ವಾ.ಕ.ರ.ಸಾ.ಸಂಸ್ಥೆಯ ಜಿಲ್ಲಾಧಿಕಾರಿ, ಶಿರಸಿ ವಿಭಾಗದ ಚಾಲಕ, ನಿರ್ವಾಹಕರು ಸೇರಿದಂತೆ ಅನೇಕರಿದ್ದರು.