ಶಿರಸಿ: ಶರೀರದ ಬೆಳವಣಿಗೆಗೆ ಆಹಾರ, ವ್ಯಾಯಾಮ ವಿಶ್ರಾಂತಿ ಇದ್ದಂತೆ ಮಾನಸಿಕ ಬೆಳವಣಿಗೆಗೆ ಒಳ್ಳೆಯ ವಿಷಯಗಳು, ಧ್ಯಾನ, ಪ್ರಾಣಾಯಾಮಗಳು ಸಹಕಾರಿಯಾಗುತ್ತದೆ. ಮನಸ್ಸಿನ ಬೆಳವಣಿಗೆಗೆ ಕೊನೆ ಎಂಬುದಿಲ್ಲ. ಮಾನಸಿಕ ಬೆಳವಣಿಗೆಗೆ ತಾಳಮದ್ದಲೆ ಒಳ್ಳೆಯ ಆಹಾರ ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀ ಶ್ರೀಮದ್ ಗಂಗಾಧರೇ0ದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಭಾನುವಾರ ತಾಲೂಕಿನ ಸೋಂದಾ ಸ್ವರ್ಣವಲ್ಲೀಯಲ್ಲಿ ಯಕ್ಷ ಶಾಲ್ಮಲಾ ಹಮ್ಮಿಕೊಂಡ ಯಕ್ಷೋತ್ಸವದ ಸಮಾರೋಪ ಸಮಾರಂಭದಲ್ಲಿ ದಿ.ಎಂ.ಎ.ಹೆಗಡೆ ದಂಟಕಲ್ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಅತ್ತೀಮುರುಡು ವಿಶ್ವೇಶ್ವರ ಹೆಗಡೆ ಅವರಿಗೆ ಪ್ರದಾನ ಮಾಡಿ ಆಶೀರ್ವಚನ ನೀಡಿದರು. ಶರೀರ, ಮನಸ್ಸಿಗೆ ಪರಿಪೂರ್ಣ ಆಹಾರ ಸಿಕ್ಕರೆ ಸಾತ್ವಿಕ ಬೆಳವಣಿಗೆ ಆಗುತ್ತದೆ. ಹಿಂದಿನ ಗುರುಕುಲ ಪದ್ಧತಿಯಲ್ಲಿ ಈ ವಿಧಾನ ಇತ್ತು. ಈಗಿನ ಶಿಕ್ಷಣ ಪದ್ಧತಿಯಲ್ಲಿ ನಾವು ಕಳೆದುಕೊಂಡಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿ ಹಿರಿಯ ಸಾಹಿತಿ ಹಾಗೂ ಸಂಶೋಧಕ ವಿಶ್ವೇಶ್ವರ ಹೆಗಡೆ ಅತ್ತಿಮುರುಡು ಮಾತನಾಡಿ, ವಿದ್ವತ್ ಹಲವರಲ್ಲಿ ಇರುತ್ತದೆ. ಅದನ್ನು ಶ್ರೀಮಂತಗೊಳಿಸುವ ಕಲೆ ಕೆಲವರಲ್ಲಿ ಮಾತ್ರ ಇರುತ್ತದೆ. ಆ ಕೆಲಸವನ್ನು ಎಂ.ಎ.ಹೆಗಡೆ ಅವರು ಮಾಡಿದ್ದಾರೆ. ಯಕ್ಷಗಾನ ಲೋಕಕ್ಕೆ ಅಪಾರ ಕೊಡುಗೆಯನ್ನು ಅವರು ನೀಡಿದ್ದಾರೆ ಎಂದರು.
ನ್ಯಾಯವಾದಿ ನಾಗರಾಜ ನಾಯಕ ಕಾರವಾರ ಮಾತನಾಡಿ, ಯಕ್ಷಗಾನ ನಶಿಸುತ್ತಿರುವ ಈ ಸಂದರ್ಭದಲ್ಲಿ ಸ್ವರ್ಣವಲ್ಲೀ ಸಂಸ್ಥಾನ ಉತ್ತೇಜನ ನೀಡುತ್ತಿರುವುದು ಆಶಾಕಿರಣವಾಗಿದೆ. ಬುದ್ಧಿಯ ಹರಿತತೆ ತಾಳಮದ್ದಲೆ ಪ್ರೇಕ್ಷಕರಿಗೆ ಬರುತ್ತದೆ. ಜಿಜ್ಙಾಸೆಯ ಹಂತಕ್ಕೆ ಯಕ್ಷಗಾನ ನಮ್ಮನ್ನು ತಂದು ನಿಲ್ಲಿಸುತ್ತದೆ. ಯಾವುದೇ ಇಂಗ್ಲೀಷ್ ನಾಟಕ, ಕಲೆಗೂ ಇಲ್ಲದ ಭಾವನಾತ್ಮಕ ಸ್ಪರ್ಷ ನಮ್ಮ ಯಕ್ಷಗಾನ ಕಲೆಯಲ್ಲಿದೆ ಎಂದರು.
ಶ್ರೀಮಠದ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ಯಕ್ಷ ಶಾಲ್ಮಲದ ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ ಸ್ವಾಗತಿಸಿದರು. ಎಂ.ಎನ್.ಹೆಗಡೆ ಹಳವಳ್ಳಿ ಯಕ್ಷೋತ್ಸವದ ಕುರಿತು ಮಾತನಾಡಿದರು. ಶಂಕರ ಭಟ್ಟ ಉಂಚಳ್ಳಿ ಪ್ರಶಸ್ತಿ ಪತ್ರವನ್ನು ವಾಚಿಸಿದರು. ಪ್ರವೀಣ ಹೆಗಡೆ ಮಣ್ಮನೆ ನಿರೂಪಿಸಿದರು. ಸುಬ್ರಾಯ ಹೆಗಡೆ ಕೆಸರಕೊಪ್ಪ ವಂದಿಸಿದರು. ನಿರ್ಣಾಯಕರ ಪರವಾಗಿ ಮಂಜುನಾಥ ಬೂರ್ಮನೆ ಅನಿಸಿಕೆ ವ್ಯಕ್ತಪಡಿಸಿದರು.
2 ದಿನಗಳು ನಡೆದ ತಾಳಮದ್ದಳೆ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ 13 ತಂಡದಲ್ಲಿ 61 ವಿದ್ಯಾರ್ಥಿಗಳು, ಕಿರಿಯರ ವಿಭಾಗದಲ್ಲಿ 12 ತಂಡದಲ್ಲಿ 63 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನ:
ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಿರುದ್ಧ ಬೆಣ್ಣೆಮನೆ, ಪ್ರಸನ್ನ ಹೆಗ್ಗಾರ, ಮುಮ್ಮೇಳದಲ್ಲಿ ಶ್ರೀಪಾದ ಭಟ್ಟ ತಂಡೀಮನೆ, ಗಣಪತಿ ನಾಯ್ಕ ಕುಮಟಾ, ಭಾಸ್ಕರ ಗಾಂವಕರ ಬಿದ್ರೆಮನೆ, ಚಂದ್ರಹಾಸನ ಹೊಸಪಟ್ಟಣ, ಸನ್ಮಯ ಭಟ್ಟ ಮಳವಳ್ಳಿ, ನಿರಂಜನ ಜಾಗ್ನಳ್ಳಿ ಕಾರ್ಯನಿರ್ವಹಿಸಿದರು.