ಯಲ್ಲಾಪುರ: ಸಮಾಜ ಸೇವೆಯ ಹಿಂದೆ ಪ್ರತಿಫಲಾಪೇಕ್ಷೆ ಇರಬಾರದು. ಹಾಗಾದಾಗ ನಮ್ಮ ಸೇವೆ ಸಾರ್ಥಕವಾಗಬಲ್ಲದು. ಮಾನವೀಯ ಮೌಲ್ಯವು ನಮ್ಮ ವ್ಯಕ್ತಿತ್ವವನ್ನು ಬೆಳಗಿಸಬಲ್ಲದು. ಜೀವನದ ನೆಮ್ಮದಿಗೆ ನಮ್ಮ ಕ್ರಿಯಾಶೀಲ ತೊಡಗುವಿಕೆಯೂ ಕಾರಣವಾಗಬಲ್ಲದು ಎಂದು ಸಾಮಾಜಿಕ ಕಾರ್ಯಕರ್ತ ಹುಸೇನ್ ಶೇಖ್ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ವಜ್ರಳ್ಳಿಯ ವಜ್ರೇಶ್ವರಿ ಯುವಕ ಮಂಡಳ ಹಾಗೂ ಗಜಾನೋತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಗಣೇಶೋತ್ಸವ ಕಾರ್ಯಕ್ರಮದ ಸಮಾರೋಪದ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ, ವ್ಯವಸ್ಥಾಪಕ ಜಿ.ವಿ.ಭಟ್ಟ, ಅಡ್ಕೇಮನೆ, ಸಾಮಾಜಿಕ ಕಾರ್ಯಕರ್ತರಾದ ವಿ ಎನ್ ಭಟ್ಟ ನಡಿಗೆಮನೆ, ಎನ್ ಸಿ ಗಾಂವ್ಕರ್, ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್ ಬಂಟ್ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ವಜ್ರೇಶ್ವರಿ ಯುವಕ ಮಂಡಳದ ಅಧ್ಯಕ್ಷ ಸತೀಶ ಗಾಂವ್ಕರ್ ಕುಂಬ್ರಿಕೊಟ್ಟಿಗೆ ವಹಿಸಿದ್ದರು.
ಆರಂಭದಲ್ಲಿ ಯುವಕ ಮಂಡಳದ ಸಂಚಾಲಕ ನರೇಶ ಶೇರುಗಾರ ಸ್ವಾಗತಿಸಿದರು. ಕಾರ್ಯದರ್ಶಿ ಗಿರೀಶ ವಡ್ಡರ ವಂದಿಸಿದರು. ರಾಜೇಶ್ ಗೌಡ, ಗುರುರಾಜ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಫೋಲಿಸ್ ಇಲಾಖೆಯಲ್ಲಿ ಸೇವೆಗಾಗಿ ಗ್ರಾಮೀಣ ಭಾಗದ ಸೀಮಾ ಗೌಡ ಬೀಗಾರರವರನ್ನು ಅಭಿನಂದಿಸಲಾಯಿತು. ನಂತರ ಹಾಡು ನೃತ್ಯ ದ ಮೆರವಣಿಗೆಯೊಂದಿಗೆ ಗಣೇಶ ಮೂರ್ತಿ ವಿಸರ್ಜನೆ ನಡೆಯಿತು.