ಹೊನ್ನಾವರ: ಪಟ್ಟಣ ಪಂಚಾಯತದ ಪೌರಕಾರ್ಮಿಕರು, ಡ್ರೈವರ್, ಲೋಡರ್, ಸ್ವೀಪರ್ಗಳಿಗೆ ಸನ್ಮಾನಿಸುವ ಮೂಲಕ ಪೌರಕಾರ್ಮಿಕರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪ.ಪಂ. ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ನಾಯಕ ಮಾತನಾಡಿ ಪೌರ ಕಾರ್ಮಿಕರು ಪ್ರಕೃತಿಯ ಮಿತ್ರರು. ಅವರು ಮಾಡುವ ಸ್ವಚ್ಚತಾ ಕಾರ್ಯ ಬೇರೆ ಯಾರು ಮಾಡಲಾರರು. ಅವರನ್ನು ನಾವು ಗೌರವಭಾವದಿಂದ ಕಾಣಬೇಕು ಎಂದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ಉಪನ್ಯಾಸಕ ಪ್ರಶಾಂತ ಹೆಗಡೆ ಮಾತನಾಡಿ, ಮಾತನಾಡುವ ಬಾಯಿಗಿಂತ ಸೇವೆ ಮಾಡುವ ಕೈ ಶ್ರೇಷ್ಟವಾದದು. ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿರಬೇಕು. ದೈಹಿಕ ಶುಚಿತ್ವದ ಬಗ್ಗೆ ಗಮನಕೊಡಿ ಎಂದು ಸಲಹೆ ನೀಡಿದರು. ಉದ್ಯಮಿ ಶ್ರೀಕಾಂತ ನಾಯ್ಕ ಮಾತನಾಡಿ, ವೃತ್ತಿಯಲ್ಲಿ ಮೇಲು-ಕೀಳು ಎನ್ನುವುದಿಲ್ಲ.ಎಲ್ಲಾ ವೃತ್ತಿಯನ್ನು ನಾವು ಗೌರವಿಸಬೇಕು. ಪೌರ ಕಾರ್ಮಿಕರು ಕುಡಿತದ ಚಟದಿಂದ ಮುಕ್ತಿಹೊಂದಿ,ಇಲ್ಲವಾದಲ್ಲಿ ಅದು ನಿಮ್ಮ ಕುಟುಂಬದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕಿವಿಮಾತು ಹೇಳಿದರು.
ಪ.ಪಂ ಸದಸ್ಯ ಶಿವರಾಜ ಮೇಸ್ತ ಮಾತನಾಡಿ,ಕರೋನಾ ಸಂದರ್ಭದಲ್ಲಿ ಪೌರ ಕಾರ್ಮಿಕರ ಸೇವೆ ಶ್ಲಾಘನೀಯವಾಗಿತ್ತು.ಅವರ ಕೆಲಸ ಎಂದು ಮರೆಯಲು ಸಾಧ್ಯವಿಲ್ಲ.ಅವರ ಕಷ್ಟಕ್ಕೆ ನಾವೆಲ್ಲಾ ಸ್ಪಂದಿಸಬೇಕು ಎಂದರು. ಪೌರಕಾರ್ಮಿಕರ ಸೇವೆ ಕುರಿತು ವಿನಾಯಕ ಮೇಸ್ತ ಅವರು ತಯಾರಿಸಿದ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ಪ.ಪಂ ನಿಕಟಪೂರ್ವ ಉಪಾಧ್ಯಕ್ಷೆ ನಿಶಾ ಶೇಟ್, ಮೇಧಾ ನಾಯ್ಕ, ಸದಸ್ಯರಾದ ಜೋಸ್ಬಿನ್ ಡಯಾಸ್, ಸುಭಾಷ್ ಹರಿಜನ್ ಉಪಸ್ಥಿತರಿದ್ದರು.