ಶಿರಸಿ: ಗೋವಿಗೆ ನಮ್ಮ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಗೋವು ಉಳಿದರೆ ಮಾತ್ರ ಮನುಕುಲದ ಉಳಿವು ಸಾಧ್ಯ. ಗೋವಿನ ಕಾಳಜಿ ಇಂದಿನ ಅನಿವಾರ್ಯತೆವಾಗಿದೆ. ಆ ನಿಟ್ಟಿನಲ್ಲಿ ಗ್ರೀನ್ ಗ್ರುಪ್ ಕಂಪನಿ ಆರಂಭಿಸಿರುವ ಸೈಲೇಜ್ ಉತ್ಪಾದನಾ ಘಟಕ ಶ್ಲಾಘನೀಯ ಎಂದು ಧಾರವಾಡ ಹಾಲು ಒಕ್ಕೂಟ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಹೇಳಿದರು.
ಅವರು ಶನಿವಾರ ಟಿ.ಆರ್.ಸಿ. ಸಭಾಭವನದಲ್ಲಿ ತೋಟಗಾರ್ಸ್ ಗ್ರೀನ್ ಗ್ರೂಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಆಯೋಜಿಸಿದ್ದ ಸೈಲೇಜ್ (ರಸಮೇವು) ಉತ್ಪಾದನಾ ಘಟಕ ಕಾರ್ಯಕ್ರಮದಲ್ಲಿ ‘ಗೋಗ್ರಾಸ’ ಸೈಲೇಜ್ ಬ್ರ್ಯಾಂಡ್ ಅನಾವರಣಗೊಳಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಗೋವಿನ ಸಾಕಾಣಿಕೆ ಗಣನೀಯವಾಗಿ ಕುಸಿಯುತ್ತಿದೆ. ಮೇವಿನ ದರ ಹೆಚ್ಚಳವೂ ಪ್ರಮುಖ ಕಾರಣಗಳಲ್ಲೊಂದಾಗಿದೆ. ಹೈನುಗಾರರಿಗೆ ಗುಣಮಟ್ಟದ ಹಾಗು ಕಡಿಮೆ ದರದಲ್ಲಿ ಸೈಲೇಜ್ ಪೂರೈಸುವುದರಿಂದ ಹೈನುಗಾರಿಕೆ ಹೆಚ್ಚಿಸಬಹುದಾಗಿದೆ. ಗ್ರೀನ್ ಗ್ರುಪ್ ಕಂಪನಿ ಆರಂಭಿಸಿರುವ ಗೋಗ್ರಾಸ ಸೈಲೇಜ್ ಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕಂಪನಿಗೆ ಭೇಟಿ ನೀಡಿ, ಸೈಲೇಜ್ ಯಂತ್ರವನ್ನು ಉದ್ಘಾಟಿಸಿ ಸೈಲೇಜ್ ಉತ್ಪಾದನೆಯ ಮಾಹಿತಿಗಳನ್ನು ಪಡೆದು ಕಂಪನಿಯ ಕಾರ್ಯಚಟುವಟಿಕೆಗೆ ಶುಭಕೋರಿದರು.
ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೃಷಿ ಇಲಾಖೆ ಉಪನಿರ್ದೇಶಕ ನಟರಾಜ್ ಮಾತನಾಡಿ, ರೈತ ಉತ್ಪಾದಕ ಕಂಪನಿಗಳನ್ನು ಬಲಗೊಳಿಸುವುದು ಸರಕಾರದ ಉದ್ದೇಶವಾಗಿದೆ. ಇಲಾಖೆಯಿಂದ ದೊರೆಯುವ ಸಹಾಯಧನಗಳನ್ನು ಪರಿಣಾಮಕಾರಿಯಾಗಿ ಸಂಸ್ಥೆಗಳು ಬಳಸಿಕೊಳ್ಳುವಂತಾಗಬೇಕು ಎಂದರು.
ಖ್ಯಾತ ಪಶು ವೈದ್ಯ ಡಾ. ಪಿ.ಎಸ್. ಹೆಗಡೆ ಮಾತನಾಡಿ, ರೈತರಿಗೆ ಗುಣಮಟ್ಟದ ಸೈಲೇಜ್ ನೀಡಿದಾಗ ಮಾತ್ರ ಪಶುಗಳ ಆರೋಗ್ಯ ಉತ್ತಮವಾಗಿಡಲು ಸಾಧ್ಯ. ಗುಣಮಟ್ಟದಲ್ಲಿ ರಾಜಿಯಾದರೆ ಅಭಿವೃದ್ಧಿ ಕಷ್ಟವಾಗುತ್ತದೆ. ರೈತರೂ ಸಹ ಉತ್ತಮ ಗುಣಮಟ್ಟದ ಸೈಲೇಜನ್ನು ಮಾತ್ರ ಪಶುಗಳಿಗೆ ನೀಡಬೇಕೆಂದು ಕರೆ ನೀಡಿದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆಯಡಿಯಲ್ಲಿ ರಚಿತವಾದ ರೈತ ಉತ್ಪಾದಕ ಕಂಪನಿಗಳಲ್ಲಿ ತೋಟಗಾರ್ಸ್ ಗ್ರೀನ್ ಗ್ರುಪ್ ಕಂಪನಿ ಹಾಗು ಯಡಳ್ಳಿಯ ಕ್ಲಾಪ್ಸ್ ಕಂಪನಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಉಳಿದ ಕಂಪನಿಗಳೂ ಸಹ ಮುಂಬರುವ ದಿನಗಳಲ್ಲಿ ಕೆಲಸ ಮಾಡಬೇಕು.ಆ ಮೂಲಕ ಎಲ್ಲ ಭಾಗದ ರೈತರ ಅಭಿವೃದ್ಧಿಗೆ ಕಾರಣವಾಗಬೇಕು. ರೈತೋತ್ಪಾದಕ ಕಂಪನಿಗಳ ಮೂಲಕ ರೈತರ ಸರ್ವಾಂಗೀಣ ಅಭಿವೃದ್ಧಿ ಸರಕಾರದ ಆದ್ಯತೆಯಾಗಿದೆ ಎಂದರು.
ತೋಟಗಾರ್ಸ್ ಗ್ರೀನ್ ಗ್ರುಪ್ ಕಂಪನಿಯ ಅಧ್ಯಕ್ಷ ಶ್ರೀಧರ ಹೆಗಡೆ ಕಡವೆ ಮಾತನಾಡಿ, ನಮ್ಮ ಭಾಗದ ರೈತರಿಗೆ ಅನುಕೂಲವಾಗಲೆಂದು ನಮ್ಮ ಗ್ರೀನ್ ಗ್ರುಪ್ ಕಂಪನಿಯ ವತಿಯಿಂದ ರಸಮೇವಿನ ಉತ್ಪಾದನಾ ಘಟಕ ಆರಂಭಿಸಲಾಗಿದೆ. ಗುಣಮಟ್ಟದ ಸೈಲೇಜ್ ಉತ್ಪಾದನೆ ನಮ್ಮ ಆದ್ಯತೆ. ಎಲ್ಲ ಹೈನುಗಾರರು ಇದರ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದರು.
ವೇದಿಕೆಯಲ್ಲಿ ಟಿ.ಅರ್.ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಉಪಾಧ್ಯಕ್ಷ ವಿಶ್ವಾಸ ಬಲಸೆ, ತೋಟಗಾರಿಕಾ ಅಧಿಕಾರಿ ಗಣೇಶ ಹೆಗಡೆ, ನಬಾರ್ಡ್ ನ ನಿವೃತ್ತ ಎಜಿಎಮ್ ಆರ್.ಎನ್.ಹೆಗಡೆ ಬಂಡಿಮನೆ, ಗ್ರೀನ್ ಗ್ರುಪ್ ಕಂಪನಿ ನಿರ್ದೇಶಕ ಶಿವಾನಂದ ಭಟ್ಟ ನಿಡಗೋಡು, ಶ್ರೀಧರ ಹೆಗಡೆ ಜಡ್ಡಿಮನೆ ಇದ್ದರು. ಕಂಪನಿ ನಿರ್ದೇಶಕ ಸುಜಯ್ ಭಟ್ಟ ಸ್ವಾಗತಿಸಿದರು. ತೋಟಗಾರ್ಸ್ ಗ್ರೀನ್ ಗ್ರುಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ ಶಾಸ್ತ್ರಿ ನಿರ್ವಹಿಸಿ, ವಂದಿಸಿದರು.