ಹಳಿಯಾಳ: ಸೀಬರ್ಡ್ ನೌಕಾನೆಲೆಯ ಭಾಗವಾಗಿ ನಿರ್ಮಾಣಗೊಳ್ಳಲಿರುವ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ವಿಸ್ತರಿತ ರನ್‌ವೇ ನಿರ್ಮಾಣ ವೆಚ್ಚ ಭರಿಸುವ ಬಗ್ಗೆ ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹಾಗೂ ಸರ್ಕಾರದ ಹೆಚ್ಚು ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ದೇಶಪಾಂಡೆ ಪತ್ರ ಬರೆದಿದ್ದಾರೆ. ಕಾರವಾರದಲ್ಲಿ 2010ರಿಂದ ಅಭಿವೃದ್ಧಿಪಡಿಸುತ್ತಿರುವ ಸೀಬರ್ಡ್ ನೌಕಾನೆಲೆಯ ಯೋಜನೆಯು 2025ರಲ್ಲಿ ಪೂರ್ಣಗೊಳ್ಳಲಿದ್ದು, ಇದು ಏಷ್ಯಾದಲ್ಲೇ ಅತಿ ದೊಡ್ಡ ನೌಕಾನೆಲೆಯಾಗಿ ಪರಿವರ್ತನೆಯಾಗಲಿದೆ. ಈ ಯೋಜನೆಯಲ್ಲಿ ರಕ್ಷಣಾ ಬಳಕೆಗಾಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕಾಮಗಾರಿಯೂ ಸಹ ಒಳಗೊಂಡಿದ್ದು, ಈ ಯೋಜನೆಯ ಭಾಗವಾಗಿ ನಾಗರೀಕ ವಿಮಾನಯಾನ ಉಪಯೋಗಕ್ಕಾಗಿ ವಿಮಾನ ನಿಲ್ದಾಣ ಅಭಿವೃದ್ದಿಪಡಿಸಲು ಕರ್ನಾಟಕ ಸರ್ಕಾರವು ರಕ್ಷಣಾ ಇಲಾಖೆಯನ್ನು ಕೋರಿದ್ದು, ಇದಕ್ಕಾಗಿ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗಾಗಲೇ ಮಂಜೂರಾಗಿರುವ ರೂ.27 ಕೋಟಿಗಳ ಜೊತೆಗೆ ಹೆಚ್ಚುವರಿಯಾಗಿ ರೂ.55 ಕೋಟಿಗಳನ್ನು ಭೂಸ್ವಾಧೀನ ವೆಚ್ಚಕ್ಕಾಗಿ ಬಿಡುಗಡೆ ಮಾಡುವಂತೆ ಕೋರಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಮನವಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.
ಈ ವಿಮಾನ ನಿಲ್ದಾಣದಲ್ಲಿ ಏರ್‌ಬಸ್-320 ವಿಮಾನ ಇಳಿಯಲು ಹಾಗೂ ಹಾರಾಟ ಮಾಡಲು ಅನುವಾಗುವಂತೆ ರನ್‌ವೇ ಅನ್ನು ಸುಮಾರು 3000 ಮೀಟರ್‌ರವರೆಗೆ ವಿಸ್ತರಿಸಬೇಕಾದ ಅವಶ್ಯಕತೆ ಇದ್ದು, ವಿಸ್ತರಿತ ರನ್‌ವೇಯ ನಿರ್ಮಾಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುವಂತೆ ರಕ್ಷಣಾ ಇಲಾಖೆ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ. ಕಾರವಾರದಲ್ಲಿ ನಾಗರೀಕ ವಿಮಾನ ನಿಲ್ದಾಣ ಸ್ಥಾಪಿಸುವುದು ಜಿಲ್ಲೆಯ ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದು, ಈ ಪ್ರದೇಶದಲ್ಲಿ ವಿಮಾನಯಾನ ಪ್ರಾರಂಭವಾದರೆ ಸಾಗರೋತ್ಪನ್ನ ಕೈಗಾರಿಕೆ, ಪ್ರವಾಸೋದ್ಯಮ, ಮೀನುಗಾರಿಕೆ, ತೋಟಗಾರಿಕೆ ಕ್ಷೇತ್ರಗಳೂ ಸೇರಿದಂತೆ ವಿವಿಧ ವಲಯದ ಆರ್ಥಿಕ ಚಟುವಟಿಕೆಗಳು ಗರಿಗೆದರಿ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಾಣಿಜ್ಯೋದ್ಯಮದ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಆರ್ಥಿಕ ಸಂಪನ್ಮೂಲದ ಸುಧಾರಣೆಯೊಂದಿಗೆ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆಯು ಸದೃಢವಾಗಲಿದೆ. ದಕ್ಷಿಣ ಗೋವಾದಲ್ಲಿದ್ದ ನಾಗರೀಕ ವಿಮಾನ ನಿಲ್ದಾಣವು ಸುಮಾರು 55 ಕಿ.ಮೀ. ದೂರವಿರುವ ಮೋಪಾಗೆ ಸ್ಥಳಾಂತರಗೊ0ಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಗೋವಾದ ನಾಗರೀಕರು ವಿಮಾನಯಾನಕ್ಕಾಗಿ ಸಮೀಪದ ಕಾರವಾರ ವಿಮಾನ ನಿಲ್ದಾಣವನ್ನು ಆಶ್ರಯಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ, ರಾಜ್ಯ ಸರ್ಕಾರ ರೈಲ್ವೆ ಯೋಜನೆಗಳಿಗಾಗಿ ಭೂಸ್ವಾಧೀನದ ವೆಚ್ಚವನ್ನು ಭರಿಸುವುದರ ಜೊತೆಗೆ ನಿರ್ಮಾಣ ವೆಚ್ಚದಲ್ಲಿ ಶೇ 50ರಷ್ಟು ಭರಿಸುತ್ತಿದೆ. ಅಲ್ಲದೆ, ಶಿವಮೊಗ್ಗ, ವಿಜಯಪುರ, ಹಾಸನ, ರಾಯಚೂರುಗಳಲ್ಲಿ ಭೂಸ್ವಾಧೀನದ ವೆಚ್ಚ ಹಾಗೂ ವಿಮಾನ ನಿಲ್ದಾಣದ ನಿರ್ಮಾಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಕಾರವಾರದ ವಿಮಾನ ನಿಲ್ದಾಣದ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ತಕ್ಷಣ ಮಾಹಿತಿ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸದರಿ ರನ್‌ವೇ ನಿರ್ಮಾಣದ ಭಾಗಶಃ ವೆಚ್ಚವನ್ನಾದರೂ ಭರಿಸುವ ಭರವಸೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದಲ್ಲಿ, ಕಾರವಾರದಲ್ಲಿ ನಾಗರೀಕ ವಿಮಾನಯಾನ ಸೇವೆ ಪ್ರಾರಂಭವಾಗಲು ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಂತಾಗುತ್ತದೆ ಹಾಗೂ ಜಿಲ್ಲೆಯ ಸಾರ್ವಜನಿಕರ ಬಹುದಿನದ ಬೇಡಿಕೆ ಈಡೇರಿಸಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜನ ಸೀಬರ್ಡ್ ನೌಕಾನೆಲೆ ಹಾಗೂ ಇತರ ಹಲವಾರು ಯೋಜನೆಗಳಿಗಾಗಿ ತ್ಯಾಗ ಮಾಡಿರುತ್ತಾರೆ. ಈಗ ನಾಗರೀಕ ವಿಮಾನ ನಿಲ್ದಾಣದ ಸೌಲಭ್ಯ ಜಿಲ್ಲೆಗೆ ದೊರಕದೇ ಹೋದಲ್ಲಿ ಜನತೆ ಅವಕಾಶ ವಂಚಿತರಾಗಿ, ಅಭಿವೃದ್ಧಿ ಕನಸಾಗಿಯೇ ಉಳಿಯಬಹುದಾಗಿದೆ. ಈ ಬಗ್ಗೆ ತಾವು ಸಮಾಲೋಚಿಸಿ ತುರ್ತು ನಿರ್ಧಾರ ಕೈಗೊಂಡು ಕಾರವಾರ ನಾಗರೀಕ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಆದ್ಯತೆ ಮೇಲೆ ಕ್ರಮ ವಹಿಸುವಂತೆ ದೇಶಪಾಂಡೆ ಕೋರಿದ್ದಾರೆ.