ಶಿರಸಿ: ಶಾಲಾ ಶಿಕ್ಷಣ ಇಲಾಖೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಪೇಲಿ ಕ್ರಾಸ್, ಜೊಯಿಡಾ ಇವರ ಸಹಯೋಗದಲ್ಲಿ ಸೆ.22 ರಂದು ನಡೆಸಲಾದ 14 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಚೆಸ್ ಮತ್ತು ಯೋಗಾಸನ ಸ್ಪರ್ಧೆಯಲ್ಲಿ ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಚೆಸ್ ಸ್ಪರ್ಧೆಯಲ್ಲಿ 6 ನೇ ತರಗತಿಯ ವಿದ್ಯಾರ್ಥಿನಿ ಅನ್ವಿತಾ ಎನ್. ಹೆಗಡೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಯೋಗಾಸನ ಸ್ಪರ್ಧೆಯಲ್ಲಿ 7 ನೇ ತರಗತಿಯ ವಿದ್ಯಾರ್ಥಿನಿ ಅರ್ಪಿತಾ ಹೆಗಡೆ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ವಿದ್ಯಾರ್ಥಿಗಳು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕರುಗಳಾದ ಶ್ರೀಮತಿ ಚೇತನಾ ಪಾವಸ್ಕರ್ ಮತ್ತು ನಾಗರಾಜ ಜೋಗಳೇಕರ್ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕ-ಶಿಕ್ಷಕೇತರ ವೃಂದ, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.