ಬೆಂಗಳೂರು : ಸ್ವಯಂ ಘೋಷಿತ ಸ್ವಾಮೀಜಿಯೆಂದು ಪೋಷಿಸಿಕೊಂಡಿರುವ ಪ್ರಣವಾನಂದ ಸ್ವಾಮೀಜಿಗಳಿಗೂ ಈಡಿಗ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕರ್ನಾಟಕ ಪ್ರದೇಶ ಈಡಿಗರ ಸಂಘ ಸ್ಪಷ್ಟ ಪಡಿಸಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್’ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ, ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ, ಪ್ರಣವಾನಂದ ಸ್ವಾಮೀಜಿಗಳು ಈಡಿಗ ಸಮುದಾಯದ ಸ್ವಯಂ ಘೋಷಿತ ಸ್ವಾಮೀಜಿಗಳೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಈಡಿಗ ಸಮುದಾಯಕ್ಕೂ ಸ್ವಾಮೀಜಿಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಸಮುದಾಯದಲ್ಲಿ ಒಡಕು ಮೂಡಿಸುತ್ತಿರುವುದು, ರಾಜಕೀಯ ಮುಖಂಡರಲ್ಲಿ ಬಿನ್ನಭಿಪ್ರಾಯಗಳನ್ನು ಮೂಡಿಸಿ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ಮೂಡಿಸುತ್ತಿರುವುದು ಸರಿಯಲ್ಲ. ನಮ್ಮ ಕೇಂದ್ರ ಸಂಘ ಹಾಗೂ ಜಿಲ್ಲಾ ಸಂಘಗಳ ವಿರುದ್ಧ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿರುವುದು ಕಂಡು ಬಂದಿದ್ದು ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಈಡಿಗ ಸಮುದಾಯ ಸಂಘ ಸ್ಥಾಪನೆಯಾಗಿ 78 ವರ್ಷಗಳು ಕಳೆದಿವೆ. 2008ರಲ್ಲಿ ರೇಣುಕಾನಂದ ಎಂಬುವವರನ್ನು ಸ್ವಾಮೀಜಿಗಳನ್ನಾಗಿ ನೇಮಕ ಮಾಡಲಾಯಿತು. ಬಳಿಕ ರೇಣುಕಾನಂದರವರು ತಮ್ಮ ಹೆಚ್ಚಿನ ಆಧ್ಯಾತ್ಮಿಕ ಅಧ್ಯಯನಕ್ಕಾಗಿ 2014 ರಲ್ಲಿ ಪೀಠವನ್ನು ತ್ಯಜಿಸಿದರು. ಪ್ರಸ್ತುತ ಬಿ.ಕೆ.ಹರಿಪ್ರಸಾದ್ ಅವರ ಒಪ್ಪಿಗೆ ಮೇರೆಗೆ ವಿಖ್ಯಾತನಂದ ಸ್ವಾಮೀಜಿಗಳನ್ನು ನೇಮಕ ಮಾಡಿಕೊಂಡು ಅಧಿಕೃತವಾಗಿ ಒಪ್ಪಿಗೆ ಪಡೆಯಲಾಗಿದೆ. ಆದರೆ ಪ್ರಣವಾನಂದ ಅನಧಿಕೃತವಾಗಿ ಈಡಿಗ ಸ್ವಾಮೀಜಿಗಳೆಂದು ಹೇಳಿಕೊಂಡು ಜನಾಂಗವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಅವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ಸಂಘದ ನಿರ್ದೇಶಕರಾದ ಶಿವಕುಮಾರ್, ಶಿವಮೊಗ್ಗ ಜಿಲ್ಲಾ ಸಂಘದ ಅಧ್ಯಕ್ಷ ಶ್ರೀಧರ್ ರಾಮನಗರ, ಚಿತ್ರದುರ್ಗ, ಬೆಳಗಾವಿ ಜಿಲ್ಲಾ ಅಧ್ಯಕ್ಷರು,ಬಿಲ್ಲವ ಅಸೊಶಿಯೇಶನ್ ಪ್ರದಾನ ಕಾರ್ಯದರ್ಶಿ ಸಂಪತ್ ಕುಮಾರ್, ನಾಮಧಾರಿ ದೀವರ ಅಧ್ಯಕ್ಷರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.