ಶಿರಸಿ: ಯಕ್ಷ ಶಾಲ್ಮಲಾ ಸಂಸ್ಥೆ ಕಳೆದ 19 ವರ್ಷದಿಂದ ನಡೆಸುತ್ತಿರುವ ಮಕ್ಕಳ ತಾಳಮದ್ದಲೆ ಸ್ಪರ್ಧೆ, ಹೊಸ್ತೋಟ, ದಂಟ್ಕಲ್ ಪ್ರಶಸ್ತಿ ಪ್ರದಾನ, ತಾಳಮದ್ದಲೆ, ಯಕ್ಷಗಾನ ಕಾರ್ಯಕ್ರಮಗಳ ಯಕ್ಷೋತ್ಸವ ಸೆ.23,24 ರಂದು ಎರಡು ದಿನಗಳ ಕಾಲ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ನಡೆಯಲಿದೆ.
ಈ ಕುರಿತು ನಗರದ ಯೋಗ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಸಂಸ್ಥೆಯ ಆರ್.ಎಸ್. ಹೆಗಡೆ ಭೈರುಂಬೆ, ಕಾರ್ಯದರ್ಶಿ ನಾಗರಾಜ ಜೋಶಿ ಮಾಹಿತಿ ನೀಡಿದರು
ಉದ್ಘಾಟನೆ, ಪ್ರಶಸ್ತಿ ಪ್ರದಾನ:
ಯಕ್ಷ ಶಾಲ್ಮಲಾ ಸಂಸ್ಥೆ ಮಠದ ಅಂಗ ಸಂಸ್ಥೆಯಾಗಿದ್ದು, 25 ವರ್ಷಗಳಿಂದ ಸಕ್ರಿಯವಾಗಿ ಯಕ್ಷಗಾನದ ಉಳಿವು, ಶಾಸ್ತ್ರ ಬದ್ಧತೆ, ಬೆಳವಣಿಗೆಗೆ ಸಕ್ರೀಯವಾಗಿ ಕಾರ್ಯ ಮಾಡುತ್ತಿದೆ ಎಂದರು.
ಯಕ್ಷಗಾನ ಅಕಾಡೆಮಿ ಹಾಗೂ ಯಕ್ಷ ಶಾಲ್ಮಲಾದ ಅಧ್ಯಕ್ಷರೂ ಆಗಿದ್ದ ದಿ.ಎಂ.ಎ. ಹೆಗಡೆ ಅವರ ನೆನಪಿನ ಪ್ರಶಸ್ತಿ ಹಿರಿಯ ವಿದ್ವಾಂಸ ಅತ್ತಿಮುರಡು ವಿಶ್ವೇಶ್ವರ ಅವರಿಗೆ ಹಾಗೂ ಯಕ್ಷ ಶಾಲ್ಮಲಾದ ಸ್ಥಾಪಕ ಅಧ್ಯಕ್ಷರೂ ಆಗಿದ್ದ ಹೊಸ್ತೋಟ ಮಂಜುನಾಥ ಭಾಗವತ ಅವರ ನೆನಪಿನ ಪ್ರಶಸ್ತಿ ಹಿರಿಯ ಯಕ್ಷಗಾನ ಕಲಾವಿದ ಥಂಡಿಮನೆ ಶ್ರೀಪಾದ ಭಟ್ಟ ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದರು.
ಎರಡೂ ದಿನ ಸಮಾರಂಭದ ಸಾನ್ನಿಧ್ಯವನ್ನು ಸ್ವರ್ಣವಲ್ಲೀ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 23ರ ಸಂಜೆ 4.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪ್ರಜಾವಾಣಿಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್, ಹಿರಿಯ ಅರ್ಥದಾರಿ ಅಶೋಕ ಭಟ್ಟ ಉಜಿರೆ ಪಾಲ್ಗೊಳ್ಳುವರು. ಆ ದಿನ ಕಲಾವಿದ ಶ್ರೀಪಾದ ಭಟ್ಟರಿಗೆ ಹೊಸ್ತೋಟ ಪ್ರಶಸ್ತಿ ಪ್ರದಾನವಾಗಲಿದೆ.
ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಮಾರಂಭ ಸೆ.24ರ ಸಂಜೆ 4.30 ಕ್ಕೆ ನಡೆಯಲಿದ್ದು, ಅತಿಥಿಯಾಗಿ ಸಚಿವರಾದ ಮಂಕಾಳು ವೈದ್ಯ, ವಕೀಲ, ಕಲಾವಿದ ನಾಗರಾಜ ನಾಯ್ಕ ಕಾರವಾರ, ವಿನಾಯಕ ಹೆಗಡೆ ದಂಟ್ಕಲ್ ಭಾಗವಹಿಸುವರು. ಇದೇ ವೇಳೆ ದಂಟ್ಕಲ್ ಪ್ರಶಸ್ತಿ ಅತ್ತಿಮುರಡು ಅವರಿಗೆ ಪ್ರದಾನವಾಗಲಿದೆ ಎಂದು ತಿಳಿಸಿದರು.
ತಾಳಮದ್ದಲೆ; ಯಕ್ಷಗಾನ:
ಮೊದಲ ದಿನ ಸಭಾ ಕಾರ್ಯಕ್ರಮದ ಬಳಿಕ ‘ವೀರಮಣಿ’ ತಾಳಮದ್ದಲೆಯಲ್ಲಿ ಹಿಮ್ಮೇಳದಲ್ಲಿ ಕೇಶವ ಕೊಳಗಿ, ಬೆಣ್ಣೆಮನೆ ಅನಿರುದ್ಧ, ಮುಮ್ಮೇಳದಲ್ಲಿ ವಿ.ಉಮಾಕಾಂತ ಕೆರೇಕೈ, ಅಶೋಕ ಭಟ್ಟ ಉಜಿರೆ, ಎಂ.ಎನ್. ಹೆಗಡೆ ಹಳವಳ್ಳಿ ಭಾಗವಹಿಸುವರು.
ಎರಡನೇ ದಿನ ಸಂಜೆ ಅತಿಥಿ ಕಲಾವಿದರಿಂದ ‘ವೀರಮಣಿ’ ಯಕ್ಷಗಾನ ಕೂಡ ನಡೆಯಲಿದ್ದು ಹಿಮ್ಮೇಳದಲ್ಲಿ ರಾಮಕೃಷ್ಣ ಹಿಲ್ಲೂರು, ಬೆಣ್ಣೆಮನೆ ಅನಿರುದ್ಧ, ಪ್ರಸನ್ನ ಹೆಗ್ಗಾರು, ಮುಮ್ಮೇಳದಲ್ಲಿ ಥಂಡಿಮನೆ, ಗಣಪತಿ ನಾಯ್ಕ, ಭಾಸ್ಕರ ಗಾಂವಕರ, ಚಂದ್ರಹಾಸ ಹೊಸಪಟ್ಟಣ, ಸನ್ಮಯ ಭಟ್ಟ, ನಿರಂಜನ ಜಾಗನಳ್ಳಿ ಪಾಲ್ಗೊಳ್ಳುವರು ಎಂದರು.
ನೊಂದಣಿ ಆರಂಭ:
ತಾಳಮದ್ದಲೆಯ ಸ್ಪರ್ಧೆಯಲ್ಲಿ ಈಗಾಗಲೇ 15 ಪ್ರೌಢ ಶಾಲಾ ತಂಡದ ಮಕ್ಕಳು, 12ಪ್ರಾಥಮಿಕ ಶಾಲಾ ತಂಡಗಳು ತಾಳಮದ್ದಲೆಗೆ ಈಗಾಗಲೇ ಹೆಸರು ನೊಂದಾಯಿಸಿವೆ. ಈವರೆಗೆ ಇಷ್ಟೊಂದು ದಾಖಲಾಗಿದ್ದು ದಾಖಲೆಯಾಗಿದೆ. ಕಳೆದ ವರ್ಷ 25 ತಂಡಗಳು ಭಾಗವಹಿಸಿದ್ದವು. ತಾಳಮದ್ದಲೆ ಸ್ಪರ್ಧೆ ಎರಡೂ ದಿನ ಬೆಳಿಗ್ಗೆ 10.30ರಿಂದ ನಡೆಯಲಿದೆ. ಮಕ್ಕಳ ತಂಡಗಳಿಗೆ ಹಿಮ್ಮೇಳದಲ್ಲಿ ಸತೀಶ ದಂಟ್ಕಲ್, ಶ್ರೀಪಾದ ಬಾಳೆಗದ್ದೆ, ಗಜಾನನ ತುಳಗೇರಿ, ಶ್ರೀಪತಿ ಕಂಚಿಮನೆ, ಕೃಷ್ಣ ಹೆಗಡೆ ಜೋಗದಮನೆ ಇತರರು ಭಾಗವಹಿಸಲಿದ್ದಾರೆ. ಆಸಕ್ತ ವಿದ್ಯಾರ್ಥಿ ತಂಡಗಳು ಸೆ.21 ರ ಒಳಗೆ ಹೆಸರು ನೊಂದಾಯಿಸಿಕೊಳ್ಳಲು ಕೊನೇ ಅವಕಾಶ ಆಗಿದ್ದು, Tel:+919448756273 ಗೆ ಸಂಪರ್ಕ ಮಾಡಬಹುದಾಗಿದೆ ಎಂದು ತಿಳಿಸಿದರು. ಈ ವೇಳೆ ಜಿ.ಜಿ.ಹೆಗಡೆ ಕನೇನಳ್ಳಿ ಇದ್ದರು.