• Slide
    Slide
    Slide
    previous arrow
    next arrow
  • ಸಪ್ತ ಸಾಗರ ದಾಟಿ ಬಂದು ಸರಣಿ ಸಾವನ್ನಪ್ಪಿದ ತಿಮಿಂಗಿಲಗಳು!

    300x250 AD

    ಹೊನ್ನಾವರ: ತಾಲೂಕಿನ ಕಡಲತೀರದಲ್ಲಿ ಒಂದೇ ವಾರದ ಅಂತರದಲ್ಲಿ ಎರಡು ಭಾರೀ ಗಾತ್ರದ ಹಾಗೂ ಒಂದು ಮರಿ ತಿಮಿಂಗಿಲದ ಕಳೇಬರ ಪತ್ತೆಯಾಗಿದೆ. ಸಪ್ತ ಸಾಗರಗಳನ್ನ ದಾಟಿ ತಾಲೂಕಿನ ಅರಬ್ಬೀ ವ್ಯಾಪ್ತಿಯಲ್ಲೇ ಮೂರು ತಿಮಿಂಗಿಲಗಳ ಕಳೇಬರ ಪತ್ತೆಯಾಗಿರುವುದು ಕಡಲ ಶಾಸ್ತ್ರಜ್ಞರ ಕಳವಳಕ್ಕೂ ಕಾರಣವಾಗಿದೆ.

    ಕಳೆದ ಭಾನುವಾರ ತಾಲೂಕಿನ ಮುಗಳಿ ಬೀಚ್‌ನಲ್ಲಿ ಸಮುದ್ರದಿಂದ ದಡಕ್ಕೆ ಸುಮಾರು ೩೫ ಮೀ. ಉದ್ದದ ತಿಮಿಂಗಿಲ ಮೃತಪಟ್ಟು ಹಲವು ದಿನಗಳಾಗಿ ಕೊಳೆತ ಬಳಿಕ ಸಮುದ್ರದ ಅಲೆಗಳ ಹೊಡೆತಕ್ಕೆ ದಡಕ್ಕೆ ತೇಲಿ ಬಂದಿತ್ತು. ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಳೆಬರಹವನ್ನ ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ನೀಡಿದ್ದರು.

    ಇದೀಗ ಶನಿವಾರ ಬೆಳಿಗ್ಗೆ ಹೊನ್ನಾವರದ ಟೊಂಕಾ ಕಾಸರಕೋಡು ಬೀಚ್ ನಲ್ಲಿ ಹೆಣ್ಣು ತಿಮಿಂಗಿಲದ ಕಳೇಬರ ಪತ್ತೆಯಾಗಿದೆ. ಇದು ಕೂಡ ಭಾರೀ ಗಾತ್ರದ್ದಾಗಿದ್ದು, ಸುಮಾರು ೨೫ ಮೀ. ಉದ್ದವಿದೆ ಎನ್ನಲಾಗಿದೆ. ಆದರೆ ಅರಣ್ಯಾಧಿಕಾರಿಗಳು ಹಾಗೂ ಕಡಲ ವಿಜ್ಞಾನಿಗಳು ಪರಿಶೀಲನೆಗೆ ತೆರಳಿದ್ದ ವೇಳೆ ಈ ಹೆಣ್ಣು ತಿಮಿಂಗಿಲ ಸಿಕ್ಕ ಅನತಿ ದೂರದಲ್ಲೇ ಇನ್ನೊಂದು ಮರಿ ತಿಮಿಂಗಿಲದ ಕಳೇಬರ ಸಿಕ್ಕಿದೆ ಎನ್ನಲಾಗಿದೆ. ಸದ್ಯ ಇವೆರಡೂ ತಿಮಿಂಗಿಲಗಳ ಕಳೇಬರವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗುತ್ತಿದ್ದು, ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.

    300x250 AD

    ಕಾರಣ ಗೊತ್ತಾಗುತ್ತಿಲ್ಲ: ಈ ಬಗ್ಗೆ ಕಡಲ ಜೀವಶಾಸ್ತ್ರಜ್ಞ ಡಾ.ಶಿವಕುಮಾರ್ ಹರಗಿ ಮಾತನಾಡಿದ್ದು, ತಿಮಿಂಗಿಲಗಳ ಕಳೇಬರ ಪೂರ್ತಿ ಕೊಳೆತಿರುವ ಕಾರಣ ಸಾವಿಗೆ ಕಾರಣವೇನೆಂದು ತಿಳಿದುಬರುತ್ತಿಲ್ಲ. ಆದರೆ ಒಂದೇ ವಾರದಲ್ಲಿ ಮೂರು ಕಳೇಬರ ದೊರೆತಿರುವುದು ಗಂಭೀರವಾಗಿದ್ದು, ಅಧ್ಯಯನ ಮಾಡಬೇಕಿದೆ ಎಂದಿದ್ದಾರೆ. ಸಿಕ್ಕ ಮೂರೂ ತಿಮಿಂಗಿಲಗಳು ಬಲೀನ್ ವ್ಹೇಲ್ ಜಾತಿಯದ್ದಾಗಿವೆ. ಸತ್ತು ಮೂರ್ನಾಲ್ಕು ದಿನಗಳ ಬಳಿಕ ಕಡಲತೀರಕ್ಕೆ ಬಂದಿವೆ. ಇವು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ ೧ರಲ್ಲಿ ಬರುವ ಕಾರಣ ಇವುಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧ್ಯಯನ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

    ಮಿಲನಕ್ಕೆ ಬಂದಾಗ ಸಾವಾಗಿರಬಹುದು: ತಿಮಿಂಗಿಲಗಳದ್ದು ಈಗ ಮಿಲನದ ಸಮಯ. ಗಂಡು, ಹೆಣ್ಣು ಹಾಗೂ ಮರಿಗಳ ಕಳೇಬರ ದೊರೆತಿರುವುದರಿಂದ ಇವು ಮಿಲನಕ್ಕೆಂದು ಶಾಂತ ಸಮುದ್ರಕ್ಕೆ ಬಂದಾಗ ಯಾವುದೋ ಬೃಹತ್ ಹಡಗುಗಳು ಡಿಕ್ಕಿಯಾಗಿ ಇವು ಸಾವನ್ನಪ್ಪಿರಲೂಬಹುದು. ಆದರೆ ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದು ಕಡಲ ವಿಜ್ಞಾನಿ ಡಾ.ಪ್ರಕಾಶ್ ಮೇಸ್ತಾ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top