ಶಿರಸಿ: ಇಲ್ಲಿನ ಪ್ರತಿಷ್ಠಿತ ಟಿಎಸ್ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಶನಿವಾರ ಜಿಲ್ಲಾ ಉಸ್ತುವಾರಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ, ಆಸ್ಪತ್ರೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಆಡಳಿತ ಮಂಡಳಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಆಸ್ಪತ್ರೆಗೆ ಆಗಮಿಸಿದ ಸಚಿವರಿಗೆ ಸ್ವಾಗತಿಸಿ, ಬರಮಾಡಿಕೊಂಡರು. ಅಲ್ಲದೇ, ಆಸ್ಪತ್ರೆಯ ಬಗ್ಗೆ ಸ್ಥೂಲ ಪರಿಚಯ ನೀಡಿ, ಉತ್ತಮ ದರ್ಜೆಯ ಚಿಕಿತ್ಸೆ ಒದಗಿಸಲು ಅಳವಡಿಸಿಕೊಂಡ ಅತ್ಯಾಧುನಿಕ ತಂತ್ರಜ್ಞಾನದ ಉಪಕರಣ ಹಾಗೂ ಚಿಕಿತ್ಸಾ ಪದ್ಧತಿ ಮಾಹಿತಿ ನೀಡಿದರು.
ನಂತರ ಮಾತನಾಡಿದ ಸಚಿವ ಮಂಕಾಳ ವೈದ್ಯ, ಟಿ ಎಸ್ ಎಸ್ ಆಸ್ಪತ್ರೆಯು ರೋಗಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ಒದಗಿಸುತ್ತಿರುವುದು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದರು. ಅಲ್ಲದೇ, ಆಸ್ಪತ್ರೆಯು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇವೆಯನ್ನು ನೀಡುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವಿಶ್ವಸ್ಥ ಮಂಡಳಿಯ ಸದಸ್ಯ ಎಂ.ವಿ.ಜೋಶಿ ಕಾಗೇರಿ, ತೋಟಗಾರ್ಸ್ ಸೇಲ್ ಸೊಸೈಟಿಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಉಪಾಧ್ಯಕ್ಷ ಎಂ.ಎನ್.ಭಟ್ ತೋಟಿಮನೆ, ಆಸ್ಪತ್ರೆಯ ವಿಶ್ವಸ್ಥ ಮಂಡಳಿಯ ಸದಸ್ಯರು ಹಾಗೂ ತೋಟಗಾರ್ಸ್ ಸೇಲ್ ಸೊಸೈಟಿಯ ನಿರ್ದೇಶಕರು ಉಪಸ್ಥಿತರಿದ್ದರು.