ಶಿರಸಿ:ತಾಲೂಕಿನ ಕುಳುವೆ ಗ್ರಾಮ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸೆ.12ರಂದು ನಡೆಯಿತು.
ಸಂಘದ ಅಧ್ಯಕ್ಷ ಚಾರುಚಂದ್ರ ಶಾಸ್ತ್ರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ 17.49 ಲಕ್ಷ ರೂ.ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.9ರಂತೆ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಸಂಘದಲ್ಲಿ 569 ಶೇರು ಸದಸ್ಯರಿದ್ದು,42.60 ಲಕ್ಷ ರೂ. ಶೇರು ಬಂಡವಾಳವಿದೆ. ಒಟ್ಟೂ ದುಡಿಯುವ ಬಂಡವಾಳ 16 ಕೋಟಿ ರೂ.ಇದೆ ಎಂದು ಸಂಘದ ಸಾಂಪತ್ತಿಕ ಸ್ಥಿತಿಯನ್ನು ತಿಳಿಸಿದರು. ಸರಕಾರದ ಆದೇಶದಂತೆ ಮುಂದಿನ ದಿನಗಳಲ್ಲಿ ಸಂಘದ ಹೆಸರು ಕುಳುವೆ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿ.ಕುಳುವೆ ಎಂದು ಬದಲಾವಣೆಯಾಗಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಎರಡನೇ ಹಾಗೂ ಐದನೇ ರ‍್ಯಾಂಕ್ ಪಡೆದ ಜನತಾ ವಿದ್ಯಾಲಯ ಕುಳುವೆ-ಬರೂರು ಇದರ ವಿದ್ಯಾರ್ಥಿಗಳಾದ ಕುಮಾರಿ ಹೆಚ್.ವಿ.ಸೌಜನ್ಯ ಹಾಗೂ ಕುಮಾರ ದರ್ಶನ ಜಯಂತ್ ಹೆಗಡೆ ಹಾಗೂ ರಾಜ್ಯ ಯೋಗ ಪ್ರದರ್ಶನದಲ್ಲಿ ಆಯ್ಕೆಯಾಗಿ ಸೆ.28ರಂದು ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಸ್ಥಳೀಯ ಪ್ರತಿಭೆ ಕು.ನಾಗರತ್ನ ಶಂಕರ ಮೊಗೇರ ಇವರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಸಂಘದ ಮುಖ್ಯಕಾರ್ಯನಿರ್ವಾಹಕ ಜಿ.ಜಿ. ಭಟ್ಟ ನಿರ್ವಹಿಸಿದರು, ಉಪಾಧ್ಯಕ್ಷ ಪ್ರಭಾಕರ ರಾಮಾ ನಾಯ್ಕ ನೇಗಾರ ಕೊನೆಯಲ್ಲಿ ವಂದಿಸಿದರು.