ಕಾರವಾರ: ಪ್ರತಿಯೊಬ್ಬರು ತಮ್ಮ ತಂದೆ- ತಾಯಿಯವರ ಸೇವೆಯನ್ನು ಮಾಡಬೇಕು ಎಂದು ಕೋಸ್ಟ್ಗಾರ್ಡ್ ಪಶ್ಚಿಮ ವಲಯದ ಕಮಾಂಡರ್, ಇನ್ಸ್ಪೆಕ್ಟರ್ ಜನರಲ್ ಮನೋಜ ಬಾಡ್ಕರ್ ಕರೆ ನೀಡಿದರು.
ನಗರದ ದಿವೇಕರ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಅವಕಾಶ ಎಂಬ ಶೀರ್ಷಿಕೆ ಅಡಿ ದಿವೇಕರ ಕಾಲೇಜು ಹಾಗೂ ಪಶ್ಚಿಮ ಕೋಸ್ಟಲ್ ಗಾರ್ಡ್ ವತಿಯಿಂದ ಕಾರ್ಯಾಗಾರ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ವಿಶಾಲ ಮನೋಭಾವವನ್ನು ಬೆಳೆಸಿಕೊಂಡು ಗುರು- ಹಿರಿಯರಿಗೆ, ತಂದೆ- ತಾಯಿಯರಿಗೆ ಗೌರವವನ್ನು ನೀಡಬೇಕು. ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಗಳನ್ನು ಹೊಂದಿರಬೇಕು. ಅಲ್ಲದೇ ಶೈಕ್ಷಣಿಕವಾಗಿ ಮುಂದೆ ಬಂದು ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು. ದೇಶದ ಅಭ್ಯುದಯಕ್ಕೆ ಇಂದಿನ ಯುವಜನತೆಯ ಪಾತ್ರ ಬಹು ಮಹತ್ವದಾಗಿದೆ. ಅವರು ಶೈಕ್ಷಣಿಕವಾಗಿ ಮುಂದೆ ಬಂದು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಬೆಳವಣಿಗೆಗೆ ಪೂರಕವಾದ ಕೊಡುಗೆಗಳನ್ನು ನೀಡಿದಲ್ಲಿ ದೇಶದ ಅಭಿವೃದ್ಧಿ ಕಂಡಿತ ಸಾಧ್ಯ ಎಂದರು.
ಈ ಸಂಧರ್ಭದಲ್ಲಿ ಇವರಿಗೆ ಪ್ರಧಾನ ಮಂತ್ರಿ ತಟರಕ್ಷಕ ಪ್ರಶಸ್ತಿ ಪಡೆದ ಕಾರಣಕ್ಕಾಗಿ ಕಾಲೇಜಿನ ವತಿಯಿಂದ ಗೌರವ ಪೂರ್ವಕ ಸನ್ಮಾನ ಮಾಡಲಾಯಿತು. ಕಮಾಂಡರ್ ಮಂಜುನಾಥ ವಿದ್ಯಾರ್ಥಿಗಳಿಗೆ ಉದ್ಯೋಗ ಮಾಹಿತಿ ಕಾರ್ಯಗಾರ ನೀಡಿದರು. ದಿವೇಕರ ಕಾಲೇಜಿನ ಪ್ರಾಚಾರ್ಯ ಡಾ.ಕೇಶವ ಕೆ. ಇದ್ದರು.