ಹಳಿಯಾಳ: ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ಕೆಎಲ್‌ಎಸ್ ವಿಡಿಐಟಿ ವಿದ್ಯಾರ್ಥಿಗಳು 2020-21ರಲ್ಲಿ ತೋರಿರುವ ಸಾಧನೆಯನ್ನು ಗುರುತಿಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯು 1 ಲಕ್ಷ ರೂಪಾಯಿ ನಗದು ಪುರಸ್ಕಾರ ನೀಡಿದೆ.
ದಶಕಗಳಿಂದ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತೋರಿರುವ ಗಣನೀಯ ಸಾಧನೆಗೆ ವಿಟಿಯು ಈ ಪುರಸ್ಕಾರವನ್ನು ನೀಡಿದೆ. ರಾಜ್ಯದ 10 ಇಂಜಿನಿಯರಿAಗ್ ಕಾಲೇಜುಗಳಿಗೆ ಈ ಪುರಸ್ಕಾರವನ್ನು ನೀಡಿದ್ದು, ವಿಡಿಐಟಿ ಉತ್ತರ ಕರ್ನಾಟಕದ ಏಕೈಕ ಇಂಜಿನಿಯರಿಂಗ್ ಕಾಲೇಜು ಈ ಪ್ರಶಸ್ತಿಗೆ ಪಾತ್ರವಾಗಿದೆ. ಮಹಿಳಾ ವಿಭಾಗದ ಕುಸ್ತಿ ಯಲ್ಲಿ ಅಪ್ರತಿಮ ಸಾಧನೆ ತೋರಿರುವ ಭುವನೇಶ್ವರಿಗೆ ವಿಶ್ವವಿದ್ಯಾಲಯವು ವಿದ್ಯಾರ್ಥಿವೇತನ ನೀಡಿ ಪುರಸ್ಕರಿಸಿದೆ.
ಕುಸ್ತಿ, ಜೂಡೋ ಸ್ಪರ್ಧೆಗಳಲ್ಲಿ ಯುನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದ ವಿಡಿಐಟಿಯ ವೀಣಾ ಸಿದ್ನಾಳ, ಭುವನೇಶ್ವರಿ, ಪ್ರತೀಕ್ಷಾ ರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ. ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿನ ಸಾಧನೆಯನ್ನು ಗುರುತಿಸಿ ಮಹಾವಿದ್ಯಾಲಯವನ್ನು ಪುರಸ್ಕಾರಿಸಿರುವುದು ಸಂತಸ ತಂದಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಲೋಕುರ್ ಹೇಳಿದ್ದಾರೆ.
ಮಹಾವಿದ್ಯಾಲಯವು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವದಲ್ಲದೆ ವಿದ್ಯಾರ್ಥಿಗಳ ಸರ್ವಾoಗಿಣ ಅಭಿವೃದ್ಧಿಗಾಗಿ ಕಟ್ಟಿಬದ್ಧವಾಗಿದೆ ಎಂದು ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿಹೇಳಿದ್ದಾರೆ. ದೈಹಿಕ ನಿರ್ದೇಶಕ ಗದಿಗಪ್ಪ ಎಳ್ಳೂರು ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.