ಸಾಗರ: ಜೀವನದ ಭವಿಷ್ಯವನ್ನು ರೂಪಿಸುವಲ್ಲಿ ಹೈಸ್ಕೂಲ್ ವಿದ್ಯಾರ್ಥಿ ಜೀವನ ತುಂಬಾ ಮಹತ್ವದ್ದಾಗಿದೆ ಎಂದು ಇತಿಹಾಸ ಪ್ರಾಧ್ಯಾಪಕ, ಸಾಮಾಜಿಕ ಕಾರ್ಯಕರ್ತರಾದ ಡಾ. ಬಾಲಕೃಷ್ಣ ಹೆಗಡೆ ಹೇಳಿದರು.
ಅವರು ಸಾಗರ ಸಮೀಪದ ಕಾನುತೋಟದಲ್ಲಿ ಶಿರಸಿ ಪ್ರೊಗ್ರೆಸ್ಸಿವ್ ಹೈಸ್ಕೂಲಿನ 1979-80ನೇ ಬ್ಯಾಚಿನ ವಿದ್ಯಾರ್ಥಿಗಳ ಬಳಗ ಆಯೋಜಿಸಿದ್ದ ಸ್ನೇಹಮಿಲನ-ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ ಬಂದಿದ್ದಕ್ಕೆ ಗೆಳೆಯರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಹೈಸ್ಕೂಲಿನಲ್ಲಿ ಪಾಠ ಮಾಡುವ ಶಿಕ್ಷಕರು ನಿಜವಾಗಿಯೂ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಭವಿಷ್ಯದ ಜೀವನಕ್ಕೆ ತಿರುವು ನೀಡಬಲ್ಲರು ಎಂದ ಅವರು ತಾವು ಜೀವನದಲ್ಲಿ ಒಂದು ಮಟ್ಟಕ್ಕೆ ಬರಲು ಪ್ರೊಗ್ರೆಸ್ಸಿವ್ ಹೈಸ್ಕೂಲಿನ ಶಿಕ್ಷಕರೂ ಕಾರಣ ಎಂದು ಅದೇ ಹೈಸ್ಕೂಲಿನ ಹಳೆಯ ವಿದ್ಯಾರ್ಥಿಯೂ ಆದ ಡಾ.ಹೆಗಡೆ ತಿಳಿಸಿದರು.
ಪ್ರತಿಯೊಬ್ಬರೂ ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಅಂಶವನ್ನು ನಾವು ಹೈಸ್ಕೂಲು ಜೀವನದಲ್ಲೇ ಕಲಿಯುತ್ತೇವೆ. ಕಲೆ, ಸಾಹಿತ್ಯ, ಸಂಸ್ಕೃತಿ, ಇತ್ಯಾದಿಗಳ ತಳ ಮಟ್ಟದ ಮಾಹಿತಿಯನ್ನು ಪಡೆಯಲು ಅದೊಂದು ಉತ್ತಮ ಹಂತ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಆ ಹೈಸ್ಕೂಲಿನಲ್ಲಿ ಜವಾನರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಖೈತಾನ್ ಫರ್ನಾಂಡಿಸ್, ಹಳೆಯ ವಿದ್ಯಾರ್ಥಿ ಎಸ್.ಕೆ. ಮಂಜುನಾಥ ಹೇಮಾ ದಂಪತಿಗಳನ್ನು ಸನ್ಮಾನಿಸಲಾಯಿತು.
ಹೈಸ್ಕೂಲ್ ಹಳೆಯ ವಿದ್ಯಾರ್ಥಿಯೂ ಆಡಳಿತ ಮಂಡಳಿಯ ಹಾಲಿ ಅಧ್ಯಕ್ಷ ರಮೇಶ ದುಬಾಶಿ, ವೆಂಕಟೇಶ ಗೋಖಲೆ, ಜಗದೀಶ ಗೌಡ, ದಿನೇಶ ಮಶಾಲ್ದಿ, ಶ್ರೀಕಾಂತ ಶೆಟ್ಟಿ, ಲಿಯೊನಾರ್ಡ ಗೊನ್ಸಾಲ್ವಿಸ್, ಪರಮಾನಂದ ಹೆಗಡೆ, ನಯನಾ ಬರ್ಕೂರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ಶಿಕ್ಷಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.