ಯಲ್ಲಾಪುರ: ಸಮಾಜದ ಸೇವೆಯು ಪ್ರಾಮಾಣಿಕವಾಗಿದ್ದಾಗ ಮಾತ್ರ ನೆಮ್ಮದಿಯ ಕಾಣಲು ಸಾಧ್ಯ. ಬದುಕಿನ ಧನ್ಯತೆ ಕಾಣುವುದೆಂದರೆ ನಾವು ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವುದೇ ಆಗಿದೆ. ಶಿಕ್ಷಣಕ್ಕೆ ಸಿಗಬೇಕಾದ ಸಹಾಯ ನೀಡಲು ನಮ್ಮ ಪ್ರತಿಷ್ಠಾನ ಸದಾಕಾಲ ನೆರವಾಗುತ್ತಿದೆ. ಅದರಲ್ಲೂ ಬಡತನದ ಗ್ರಾಮೀಣ ಭಾಗದವರಿಗೆ ನಮ್ಮ ಸಹಾಯ ನೆರವಾಗುವುದೇ ನಮ್ಮ ಕಳಕಳಿಯಾಗಿದೆ ಎಂದು ಡಾ.ರೇಣುಕಾ ಕುಚನಾಳರವರು ಅಭಿಪ್ರಾಯಪಟ್ಟರು.
ಅವರು ವಜ್ರಳ್ಳಿಯ ಸರ್ವೋದಯ ಸಭಾಭವನದಲ್ಲಿ ಧಾರವಾಡದ ಶೇಷತಾರಾ ಪ್ರತಿಷ್ಠಾನವು ಶನಿವಾರ ಆಯೋಜಿಸಿದ್ದ ಗ್ರಾಮೀಣ ವಿದ್ಯಾರ್ಥಿನಿಯರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.
ಪ್ರಾಸ್ತಾವಿಕವಾಗಿ ಶೇಷಗಿರಿ ಪ್ರತಿಷ್ಠಾನದ ವ್ಯವಸ್ಥಾಪಕ, ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ನಿವೃತ್ತ ರಕ್ಷಣಾ ಸಹಾಯಕ ಅಧೀಕ್ಷಕ ಸುಭಾಶ್ಚಂದ್ರ ಜಾಧವರವರು ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ವರ್ಷಗಳ ಕಾಲ ಸೇವೆ ಮಾಡಿ ನಿವೃತ್ತರಾದ ನಂತರ ಧಾರವಾಡದ ಶೇಷತಾರಾ ಪ್ರತಿಷ್ಠಾನ ಸ್ಥಾಪಿಸಿ ಹೆಣ್ಣು ಮಕ್ಕಳ ಶಿಕ್ಷಣ ಸಹಾಯಧನ ವಿತರಿಸಲಾಗುತ್ತಿದೆ. ಉತ್ತರಕನ್ನಡದ ಗ್ರಾಮೀಣ ಭಾಗದ 37 ಬಡ ವಿಧ್ಯಾರ್ಥಿನಿಯರಿಗೆ ಡಾ.ರೇಣುಕಾ ಕುಚನಾಳರವರು ತಂದೆ ತಾಯಿಯರ ಸ್ಮರಣಾರ್ಥ ಶೇಷತಾರಾ ಪ್ರತಿಷ್ಠಾನದಿಂದ ಐದು ಸಾವಿರ ರೂ.ಗಳ ಚೆಕ್ ವಿತರಿಸುವ ಸಂಕಲ್ಪವನ್ನು ಮಾಡಿದ್ದೇವೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಗತಿ ವಿದ್ಯಾಲಯ ಭರತನಹಳ್ಳಿಯ ಮುಖ್ಯಾಧ್ಯಾಪಕ ವಿನಾಯಕ ಹೆಗಡೆ ಸಮಾಜಕ್ಕೆ ಕೊಡುಗೆ ನೀಡುವಾಗ ಯಾವುದೇ ಸ್ವಾರ್ಥವಿರಬಾರದು ಎಂದರು. ವೇದಿಕೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ ಅಧ್ಯಕ್ಷ ಭಗೀರಥ ನಾಯ್ಕ, ಸರ್ವೋದಯ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಟಿ.ಸಿ.ಗಾಂವ್ಕಾರ, ಪ್ರತಿಷ್ಠಾನದ ನೀಲಕಂಠ ಹಿತ್ಲಮಕ್ಕಿ ಮುಂತಾದವರು ಉಪಸ್ಥಿತರಿದ್ದರು. ನಾಗಶ್ರೀ, ದಿಶಾ ಹೆಬ್ಬಾರ್ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕರಾದ ಎಮ್.ಕೆ.ಭಟ್ಟ ಸ್ವಾಗತಿಸಿದರು. ಶಿಕ್ಷಕ ಚಿದಾನಂದ ಹಳ್ಳಿ ನಿರ್ವಹಿಸಿದರು. ಶಿಕ್ಷಕಿ ಸರೋಜಾ ಭಟ್ಟ ವಂದಿಸಿದರು.