ಸಿದ್ದಾಪುರ: ತಾಲೂಕಿನ ಸೊವಿನಕೊಪ್ಪ ಹಾಗೂ ಕ್ಯಾದಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 14 ಗ್ರಾಮಗಳ ವ್ಯಾಪ್ತಿಯ ರೈತರ ಜೀವನಾಡಿಯಾಗಿರುವ ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 29.97 ಲಕ್ಷ ರು ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ ತಿಳಿಸಿದ್ದಾರೆ.
ಈ ಕುರಿತು ಸಭೆ ನಡೆಸಿ ಪ್ರಕಟಣೆ ನೀಡಿರುವ ಅವರು, 1976ರಲ್ಲಿ ಸ್ಥಾಪನೆಯಾದ ಕ್ಯಾದಗಿ ಸೊಸೈಟಿ ಅನೇಕ ಏಳುಬೀಳುಗಳ ನಡುವೆ 46 ವಸಂತಗಳನ್ನು ಪೂರೈಸಿ 47ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರಸ್ತುತ ಸಂಘದಲ್ಲಿ 1323 ಸದಸ್ಯರಿದ್ದು, ಮಾರ್ಚ್ ಅಂತ್ಯಕ್ಕೆ 1.97 ಕೋಟಿ ಶೇರು ಹೊಂದಿದೆ. ಸಂಘವು ವಿವಿಧ ರೀತಿಯ ಠೇವುಗಳನ್ನು ಆಕರ್ಷಕ ಬಡ್ಡಿ ದರದಲ್ಲಿ ಸ್ವೀಕರಿಸುತ್ತಿದ್ದು, ವಾರ್ಷಿಕ ವರ್ಷದ ಅಂತ್ಯಕ್ಕೆ 6.55 ಕೋಟಿ ಠೇವಣಿ ಹೊಂದಿದೆ. ದುಡಿಯುವ ಬಂಡವಾಳ 22.55 ಕೋಟಿ ಹೊಂದಿದೆ. ಒಟ್ಟಾರೆ ಸಂಘವು ಪ್ರಸಕ್ತ ವರ್ಷ 29.97 ಲಕ್ಷ ರು ಲಾಭ ಗಳಿಸಿದೆ. ಸದಸ್ಯರ ಅನುಕೂಲಕ್ಕೆ ಅನುಗುಣವಾಗಿ ಸಂಘವು ಸಾಲ ನೀಡುತ್ತಿದೆ. ಪ್ರಸಕ್ತ ಸಾಲಿನಲ್ಲಿ 5.99 ಕೋಟಿ ಬೆಳೆ ಸಾಲ, 5.53 ಕೋಟಿ ಮಾಧ್ಯಮಿಕ ಸಾಲ, 5.31 ಕೋಟಿ ಬಳಕೆ ಸಾಲ ಹಾಗೂ 10.31 ಲಕ್ಷ ಇತರೇ ಸಾಲ ನೀಡಿದ್ದು, ತಾವು ಪಡೆದ ಸಾಲವನ್ನು ಸದಸ್ಯರು ನಿಗದಿತ ಅವಧಿಯೊಳಗೆ ಮರುಪಾವತಿ ಮಾಡುವಂತೆ ಎಂ.ಜಿ.ನಾಯ್ಕ ಕೋರಿದರು.
ಅಂತ್ಯ ಸಂಸ್ಕಾರ ನಿಧಿಯಡಿ ಸಂಘದ ಸದಸ್ಯರು ಮೃತಪಟ್ಟಾಗ ಸಂಘದ ನಿರ್ದೇಶಕರು ಕುಟುಂಬಸ್ಥರಿಗೆ ಸಾಂತ್ವನ ಹೇಳಿ 10 ಸಾವಿರ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಜತೆಗೆ ಭವಿಷ್ಯದ ದೃಷ್ಟಿಯಿಂದ ಸಂಘದ ಮೇಲ್ಚಾವಣಿ ಹಾಗೂ ವೇದಿಕೆ ನಿರ್ಮಿಸಲಾಗಿದೆ. ಸೂಪರ್ ಮಾರ್ಕೆಟ್ ಸ್ಥಾಪನೆಗೆ ಚಿಂತನೆ ನಡೆಸಿದಂತೆ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಗಣೇಶ ಭಟ್ಟ ಕೆರೆಹೊಂಡ, ನಿರ್ದೇಶಕರಾದ ರವಿ ನಾಯ್ಕ ಹೆಗ್ಗಾರಕೈ, ಪರಮೇಶ್ವರ ನಾಯ್ಕ ಶಿರಗಳ್ಳೆ, ವೆಂಕಟೇಶ ಗೌಡ ಕುಂಬಾರಕುಳಿ, ಗಣಪತಿ ನಾಯ್ಕ ಹೆಗ್ಗೇರಿ, ಲಕ್ಷ್ಮಣ ನಾಯ್ಕ ಹೊನ್ನೆಬಿಡಾರ, ಸುಬ್ರಾಯ ಹೆಗಡೆ ಮಕ್ಕಿಗದ್ದೆ, ನಾರಾಯಣ ಹಸ್ಲರ ಹಂದಿಮನೆ, ಕೆ.ಪಿ.ರಘುಪತಿ ಕ್ಯಾದಗಿ, ವಿಜಯಾ ನಾಯ್ಕ ಹಳ್ಳಿಬೈಲ್, ರಾಮಚಂದ್ರ ಹೆಗಡೆ ಬಳಲಿಗೆ, ಗೌರ್ಯ ನಾಯ್ಕ ಹೆಗ್ಗಾರಕೈ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ನಾರಾಯಣ ಗೌಡ ಉಪಸ್ಥಿತರಿದ್ದರು.
ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘದ 47ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಸೆಪ್ಟೆಂಬರ 9 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ವಾರ್ಷಿಕ ಸಭೆಯಲ್ಲಿ ಸಂಘದ 17 ಜನ ಹಿರಿಯ ಸದಸ್ಯರನ್ನು ಸನ್ಮಾನಿಸಲಾಗುವುದು. ಎಲ್ಲಾ ಸದಸ್ಯರು ಅಂದು ನಿಗದಿಯ ಸಮಯದೊಳಗೆ ಆಗಮಿಸಿ ಸಭೆ ಯಶಸ್ವಿಗೊಳಿಸಬೇಕೆಂದು ಎಂ.ಜಿ.ನಾಯ್ಕ ಹಾದ್ರಿಮನೆ ಕರೆ ನೀಡಿದರು.