ಶಿರಸಿ; ಸಂಗೀತ ಕ್ಷೇತ್ರದಲ್ಲಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಛಾಪು ಮೂಡಿಸಿರುವ ನಗರದ ಜನನಿ ಮ್ಯೂಸಿಕ್ ಸಂಸ್ಥೆಯಿoದ ಶ್ರೀ ಕೃಷ್ಣ ಗಾನಾಮೃತ ಕಾರ್ಯಕ್ರಮ ಇಲ್ಲಿಯ ತೋಟಗಾರರ ಕಲ್ಯಾಣ ಮಂಟಪದಲ್ಲಿ ಸೆ.10ರಂದು ಆಯೋಜನೆಯಾಗಿದೆ. ಕೃಷ್ಣಾಷ್ಟಮಿ ಸಂದರ್ಭದಲ್ಲಿ ಜನನಿ ಸಂಸ್ಥೆ ಪ್ರತಿವರ್ಷ ಈ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದೆ.
ಸೆ.10ರ ಸಂಜೆ 7ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಶಾಸಕ ಭೀಮಣ್ಣ ಟಿ.ನಾಯ್ಕ ಉದ್ಘಾಟಿಸುವರು. ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಪತ್ರಕರ್ತ ಕೃಷ್ಣಮೂರ್ತಿ ಕೆರೆಗದ್ದೆ, ಕೆರೆಮನೆ ಇಡಗುಂಜಿ ಮೇಳದ ಕಾರ್ಯದರ್ಶಿ ರಾಜೇಶ್ವರಿ ಎಸ್.ಹೆಗಡೆ, ಅಡಕೆ ವರ್ತಕ ಶಂಕರ ಹೆಗಡೆ ಭಾಗವಹಿಸುವರು. ಇದಕ್ಕೂ ಮುನ್ನ ಹಿರಿಕಿರಿಯ ಕಲಾವಿದರಿಂದ ಶ್ರೀಕೃಷ್ಣ ಭಜನ್ ನಡೆಯಲಿದ್ದು ತಬಲಾದಲ್ಲಿ ರಾಮದಾಸ ಭಟ್ಟ ಮತ್ತು ಕಿರಣ ಹೆಗಡೆ ಕಾನಗೋಡ ಸಾಥ್ ನೀಡುವರು.
ಸಂಜೆ 4ರಿಂದ ಸಮರ್ಥ ಹೆಗಡೆ ತಂಗಾರಮನೆ ಅವರಿಂದ ಕೊಳಲು ವಾದನ ನಡೆಯಲಿದ್ದು ಡಾ.ಉದಯ ಕುಲಕರ್ಣಿ ಗೋವಾ ತಬಲಾದಲ್ಲಿ ಸಹಕರಿಸುವರು.
ಸಭಾ ಕಾರ್ಯಕ್ರಮದ ನಂತರ ವಿದುಷಿ ರೇಖಾ ದಿನೇಶ ಅವರಿಂದ ಗಾಯನ ಕಾರ್ಯಕ್ರಮ ಸಂಘಟಿಸಲಾಗಿದ್ದು ತಬಲಾದಲ್ಲಿ ಡಾ.ಉದಯ ಕುಲಕರ್ಣಿ ಗೋವಾ, ಹಾರ್ಮೊನೀಯಂನಲ್ಲಿ ಸತೀಶ ಭಟ್ಟ ಹೆಗ್ಗಾರ್, ಕೊಳಲಿನಲ್ಲಿ ಸಮರ್ಥ ಹೆಗಡೆ ತಂಗಾರಮನೆ ಸಾಥ್ ನೀಡುವರು. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜನನಿ ಮ್ಯೂಸಿಕ್ ಸಂಸ್ಥೆ ಕಾರ್ಯದರ್ಶಿ ದಿನೇಶ ಹೆಗಡೆ ಕೋರಿದ್ದಾರೆ.