Slide
Slide
Slide
previous arrow
next arrow

ಸಂಚಾರ ದಟ್ಟಣೆ:ಶಿರಸಿಯಲ್ಲಿ ಸಂಚಾರ ಪೋಲೀಸ್ ಠಾಣೆ ಅನುಷ್ಠಾನಕ್ಕೆ ಆಗ್ರಹ

300x250 AD

ಶಿರಸಿ: ಬಿಜೆಪಿ ಅಧಿಕಾರವಧಿಯಲ್ಲಿ ಶಿರಸಿಗೆ ಮಂಜೂರು ಮಾಡಿದ್ದ ಸಂಚಾರ ಪೊಲೀಸ್ ಠಾಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ಶಿರಸಿ ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆಯಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದ್ದು, ನಗರ ವ್ಯಾಪ್ತಿಯಲ್ಲಿ ಸಣ್ಣ ಪುಟ್ಟ ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ.

ಶಿರಸಿ ಪಟ್ಟಣದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಗರ ವ್ಯಾಪ್ತಿಯಲ್ಲಿ ಸರಿಯಾದ ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಏಕಮುಖ ಸಂಚಾರ ವ್ಯವಸ್ಥೆ ಅನುಷ್ಠಾನದಲ್ಲಿನ ದೋಷಗಳು ಸಂಚಾರ ದಟ್ಟಣೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಜತೆಗೆ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ 2023ರ ಫೆಬ್ರವರಿಯಲ್ಲಿ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡಲಾಗಿತ್ತು.

ಈ ಬಗ್ಗೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಧ್ವನಿಯೆತ್ತಿದ್ದು, ಜಿಲ್ಲೆಯಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಶಿರಸಿಯಲ್ಲಿ ಜನಜೀವನಕ್ಕೆ ಅಗತ್ಯವಿರುವಂತಹ ಅನೇಕ ಸಂಗತಿಗಳನ್ನು ನಾನು ಮಂಜೂರು ಮಾಡಿಸಿದ್ದು, ಅದರಲ್ಲಿ ಕೆಲವು ಕುಂಟುತ್ತಾ ಸಾಗುತ್ತಿವೆ. ಈ ಪೈಕಿ ಸಂಚಾರಿ ಪೊಲೀಸ್ ಠಾಣೆ ಬಹುಮುಖ್ಯವಾದದ್ದು. ಶಿರಸಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಇಂಥ ನಗರ ಗ್ರಾಮೀಣ ಪ್ರದೇಶದಲ್ಲಿ ಸ್ವಂತ ವಾಹನ ಬಳಸಬೇಕಾದ ಸ್ಥಿತಿ ಜನರದ್ದು. ಜನಸಂಖ್ಯೆ ಹೆಚ್ಚಿರುವುದರಿಂದ ವಾಹನ ದಟ್ಟಣೆಯ ಪ್ರಮಾಣ ಶಿರಸಿಯಲ್ಲಿ ಜಾಸ್ತಿ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆಯನ್ನು ನಾನು ಮಂಜೂರು ಮಾಡಿಸಿದ್ದೆ. ಈಗ ಅದು ಅನುಷ್ಠಾನಕ್ಕೆ ಬರಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ, ಇಲ್ಲಿನ ಸ್ಥಳೀಯ ಶಾಸಕರು ಅನುಷ್ಠಾನಕ್ಕೆ ಬೇಕಾದ ಇಚ್ಛಾಶಕ್ತಿ ತೋರಿಸಿ ಶಿರಸಿ ನಗರದ ಮುಕ್ತ ಸಂಚಾರದ ಅವಕಾಶವನ್ನು ಇಲ್ಲಿಯ ಜನರಿಗೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸುತ್ತೇನೆ ಎಂದರು.ರಾಜಕಾರಣದ ದೃಷ್ಟಿಯಿಂದ ಈ ಅಭಿವೃದ್ಧಿ ಕೆಲಸ ಕಾರ್ಯವನ್ನು ನೋಡದೆ, ಜನತೆಯ ಅಗತ್ಯಕ್ಕೆ ಮಾಡಿಸಿರುವ ಈ ಅಭಿವೃದ್ಧಿ ಕೆಲಸಗಳ ಅನುಷ್ಠಾನ ತೀವ್ರಗತಿಯಲ್ಲಿ ಆಗಬೇಕೆಂದು ತಿಳಿಸಿದರು.

300x250 AD

ನಗರದ ಹಳೇ ಬಸ್ ನಿಲ್ದಾಣ ವೃತ್ತದಿಂದ ಡ್ರೈವರ್ ಕಟ್ಟೆ, ಶಿವಾಜಿ ಚೌಕದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಸಾಹಸಪಡುವಂತಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ನಗರದ ಕೆಲ ರಸ್ತೆಗಳನ್ನು ಏಕಮುಖ ಸಂಚಾರ ರಸ್ತೆಯನ್ನಾಗಿ ಪೊಲೀಸ್ ಇಲಾಖೆ ಗುರುತು ಮಾಡಿದ್ದರೂ, ಅದು ಕೆಲವೇ ದಿನಗಳಿಗೆ ಮಾತ್ರ ಸೀಮಿತವಾಗಿ ಇದೀಗ ಯಥಾರೀತಿ ಮೊದಲಿನಂತೆ ಸಂಚಾರ ವ್ಯವಸ್ಥೆ ನಡೆದಿದೆ.

ಶಿರಸಿಯಲ್ಲಿ ಮೂರು ಪೊಲೀಸ್ ಠಾಣೆಗಳಿದ್ದು, ಕೆಲವೊಮ್ಮೆ ಸಂಚಾರ ದಟ್ಟಣೆ ನಿಯಂತ್ರಿಸಲು ಸಿಬ್ಬಂದಿ ಕೊರತೆ ಸಹ ಎದುರಾಗುತ್ತಿದೆ. ಈ ಹಿಂದೆ ಇದ್ದ ರಸ್ತೆಯನ್ನು ವಿಸ್ತರಿಸಿ ನಗರದ ಮುಖ್ಯ ರಸ್ತೆಗಳನ್ನು ದ್ವಿ ಪಥ ಮಾರ್ಗಗಳಾಗಿ ನಿರ್ಮಿಸಲಾಗಿದ್ದರೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಪೊಲೀಸರಿಗೂ ಸಮಸ್ಯೆಯಾಗಿ ಕಾಡುತ್ತಿದೆ. ಕಾರಣ ಶೀಘ್ರವಾಗಿ ಸಂಚಾರ ಪೊಲೀಸ್ ಠಾಣೆ ಅನುಷ್ಠಾನ ಆಗಲಿ ಎನ್ನುವ ಮಾತುಗಳು ಕೇಳಿಬರುತ್ತಿದೆ.

Share This
300x250 AD
300x250 AD
300x250 AD
Back to top