• Slide
    Slide
    Slide
    previous arrow
    next arrow
  • ಯುಎಸ್​ ಓಪನ್‌ ಡಬಲ್ಸ್‌: ಫೈನಲ್​ ಪ್ರವೇಶಿಸಿದ ಬೋಪಣ್ಣ​ ಜೋಡಿ

    300x250 AD

    ಯುಎಸ್‌ ಓಪನ್‌ ಸೆಮಿಫೈನಲ್​ ಪಂದ್ಯದಲ್ಲಿ ಫ್ರಾನ್ಸ್‌ನ ನಿಕೋಲಸ್ ಮಹುತ್ ಮತ್ತು ಪಿಯರೆ-ಹ್ಯೂಗ್ಸ್ ಹರ್ಬರ್ಟ್ ವಿರುದ್ಧ ಬೋಪಣ್ಣ ಮತ್ತು ಎಬ್ಡೆನ್ ಗೆಲುವು ಸಾಧಿಸಿದ್ದರು.

    ನ್ಯೂಯಾರ್ಕ್ : ಭಾರತದ ಸ್ಟಾರ್​ ಟೆನಿಸ್​ ಆಟಗಾರ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರು ​ಯುಎಸ್ ಓಪನ್-2023ರ ಪುರುಷರ ಡಬಲ್ಸ್​ನಲ್ಲಿ ಕೊನೆಯ ಘಟ್ಟ ತಲುಪಿದ್ದಾರೆ.

    ನ್ಯೂಯಾರ್ಕ್‌ನ ಲೂಯಿಸ್ ಆರ್ಮ್‌ಸ್ಟ್ರಾಂಗ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಫ್ರೆಂಚ್ ಜೋಡಿ ಪಿಯರೆ-ಹ್ಯೂಗ್ಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ ವಿರುದ್ಧ ನೇರ ಸೆಟ್‌ಗಳ ಜಯದೊಂದಿಗೆ ಫೈನಲ್​ಗೆ ಲಗ್ಗೆ ಇಟ್ಟರು.

    ಈ ವರ್ಷ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಆರನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿ, ಮೊದಲ ಸೆಟ್ ​ಅನ್ನು ಟೈ-ಬ್ರೇಕರ್​ನಲ್ಲಿ 7-6 (7-3) ಅಂತರದಿಂದ ಗೆದ್ದುಕೊಂಡಿತ್ತು. ಎರಡನೇ ಸೆಟ್​ನಲ್ಲೂ ಅದ್ಭುತ ಆಟ ಮುಂದುವರೆಸಿ 6-2 ಅಂತರದಿಂದ ಒಂದು ಗಂಟೆ 34 ನಿಮಿಷಗಳಲ್ಲಿ ಜಯ ಸಾಧಿಸಿದರು. ಆರ್ಥರ್ ಆಶ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಬೋಪಣ್ಣ ಮತ್ತು ಎಬ್ಡೆನ್ ತಂಡ ಮೂರನೇ ಶ್ರೇಯಾಂಕದ ಯುಎಸ್‌ಎ ರಾಜೀವ್ ರಾಮ್ ಮತ್ತು ಗ್ರೇಟ್ ಬ್ರಿಟನ್‌ನ ಜೋ ಸಾಲಿಸ್‌ಬರಿ ವಿರುದ್ಧ ಸೆಣಸಾಡುವರು. ರಾಮ್ ಮತ್ತು ಸಾಲಿಸ್ಬರಿ ಎರಡು ಬಾರಿ ಯುಎಸ್ ಓಪನ್ ಪುರುಷರ ಡಬಲ್ಸ್ ಹಾಲಿ ಚಾಂಪಿಯನ್ ಆಗಿದ್ದಾರೆ.

    300x250 AD

    ಇನ್ನೊಂದೆಡೆ, ಕೊಡಗಿನ ಕುವರ ರೋಹನ್ ಬೋಪಣ್ಣ (43) ಟೆನಿಸ್​ ಓಪನ್ ಯುಗದಲ್ಲಿ ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಫೈನಲ್ ತಲುಪಿದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. ಇದು ಇವರ ವೃತ್ತಿಜೀವನದ ಎರಡನೇ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಿದೆ. ಇದೇ ಜೋಡಿ ಮಾರ್ಚ್​ನಲ್ಲಿ ಎಟಿಪಿ ಮಾಸ್ಟರ್ಸ್ 1000 ಪ್ರಶಸ್ತಿ ಗೆದ್ದುಕೊಂಡಿತ್ತು. ಇದರೊಂದಿಗೆ 2015ರಲ್ಲಿ ತಮ್ಮ 42ನೇ ವಯಸ್ಸಿನಲ್ಲಿ ಸಿನ್ಸಿನಾಟಿ ಮಾಸ್ಟರ್ಸ್‌ ಪ್ರಶಸ್ತಿ ಗೆದ್ದು ಬೀಗಿದ್ದ ಕೆನಡಾದ ಡೇನಿಯಲ್ ನೆಸ್ಟರ್ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದ ಹಿರಿಯ ಆಟಗಾರ ಎಂಬ ಖ್ಯಾತಿಗೆ ಬೋಪಣ್ಣ ಪಾತ್ರರಾಗಿದ್ದರು. ಕೊನೆಯ ಬಾರಿಗೆ 2010ರಲ್ಲಿ ಬೋಪಣ್ಣ ಅವರು ಪಾಕ್​ ಟೆನಿಸ್​ ಆಟಗಾರ ಐಸಾಮ್-ಉಲ್-ಹಕ್ ಖುರೇಷಿ ಅವರೊಂದಿಗೆ ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದರು.

    ಒಂದು ಗಂಟೆ 28 ನಿಮಿಷದ ಕಾಲ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಇಂಡೋ-ಆಸ್ಟ್ರೇಲಿಯನ್ ಜೋಡಿ 15ನೇ ಶ್ರೇಯಾಂಕದ ಸ್ಥಳೀಯ ಜೋಡಿ ನಥಾನಿಯಲ್ ಲ್ಯಾಮನ್ಸ್ ಮತ್ತು ಜಾಕ್ಸನ್ ವಿಥ್ರೋ ಅವರನ್ನು 7-6(10), 6-1 ಸೆಟ್‌ಗಳಿಂದ ಮಣಿಸಿದ್ದರು. ಲ್ಯಾಮನ್ಸ್ ಮತ್ತು ವಿಥ್ರೋ ಹಿಂದಿನ ಸುತ್ತಿನಲ್ಲಿ ಹಾಲಿ ವಿಂಬಲ್ಡನ್ ಚಾಂಪಿಯನ್ ಮತ್ತು ಅಗ್ರ ಶ್ರೇಯಾಂಕದ ನೆದರ್ಲ್ಯಾಂಡ್ಸ್‌ನ ವೆಸ್ಲಿ ಕೂಹ್ಲೋಫ್ ಮತ್ತು ಗ್ರೇಟ್ ಬ್ರಿಟನ್‌ನ ನೀಲ್ ಸ್ಕುಪ್ಸ್ಕಿ ಅವರನ್ನು ಸೋಲಿಸಿದ್ದರು.

    ಇಂಡೋ-ಆಸ್ಟ್ರೇಲಿಯನ್ ಜೋಡಿಯ ಸಾಧನೆ: ಈ ವರ್ಷ ದೋಹಾ ಮತ್ತು ಇಂಡಿಯನ್ ವೆಲ್ಸ್‌ನಲ್ಲಿ ಪ್ರಶಸ್ತಿಗಳನ್ನು ಗೆದ್ದಿದೆ. ರೋಟರ್‌ಡ್ಯಾಮ್, ಮ್ಯಾಡ್ರಿಡ್‌ನಲ್ಲಿ ಫೈನಲ್‌ ತಲುಪಿದೆ. ನವೆಂಬರ್ 12ರಿಂದ 19 ರವರೆಗೆ ಟುರಿನ್‌ನಲ್ಲಿ ನಡೆಯಲಿರುವ ಎಟಿಪಿ ಫೈನಲ್ಸ್‌ನಲ್ಲಿ ಇವರು ಮೂರನೇ ಸ್ಥಾನದಲ್ಲಿದ್ದಾರೆ. ಇಲ್ಲಿ ಟಾಪ್​ ಎಂಟು ಜೋಡಿಗಳು ಸ್ಪರ್ಧಿಸಲಿವೆ.

    Share This
    300x250 AD
    300x250 AD
    300x250 AD
    Leaderboard Ad
    Back to top