ಕಾರವಾರ: ಪ್ರತಿಯೊಬ್ಬ ವಿದ್ಯಾರ್ಥಿಯೂ ಗುರುಗಳಿಗೆ ಗೌರವ ನೀಡುವುದನ್ನು ಯಾವಾಗಲೂ ಮರೆಯಬಾರದು ಎಂದು ಶಿರವಾಡ ಗ್ರಾಪಂ ಅಧ್ಯಕ್ಷೆ ಅಶ್ವಿನಿ ಬಾಂದೇಕರ ಹೇಳಿದರು.
ತಾಲೂಕಿನ ಶಿರವಾಡದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ಗುರುವಾರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುತಿನ ಚೀಟಿ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಬಗ್ಗೆ ವಿವರವಾದ ಮಾಹಿತಿ ಇರುವ ಗುರುತಿನ ಚೀಟಿಯನ್ನು ಎಲ್ಲ ಶಾಲಾ ಮಕ್ಕಳು ಹೊಂದಿರುವುದು ಅವಶ್ಯಕವಾಗಿದೆ. ಚೆನ್ನಾಗಿ ಓದಿ ಜೀವನದಲ್ಲಿ ಯಶಸ್ಸು ಗಳಿಸಿ ಎಂದು ವಿದ್ಯಾರ್ಥಿಗಳನ್ನು ಹಾರೈಸಿದರು.
ಶಿರವಾಡ ಗ್ರಾ.ಪಂ ಉಪಾಧ್ಯಕ್ಷ ದಿಲೀಪ ನಾಯ್ಕ ಮಾತನಾಡಿ, ಈ ಹಿಂದೇ ಇದೇ ಶಾಲೆಯಲ್ಲಿ ಕಲಿತು ಈಗ ಶಾಲೆಯ ಸೇವೆ ಮಾಡುವ ಅವಕಾಶ ನಮಗೆ ಬಂದಿದೆ. ಎಲ್ಲ ಶಾಲೆ ಮಕ್ಕಳೂ ಐಡಿ ಕಾರ್ಡ್ ಹಾಕಿಕೊಂಡಿರುತ್ತಾರೆ. ಆದ್ದರಿಂದ ನಮ್ಮ ಶಾಲೆಯ ಮಕ್ಕಳೂ ತಮ್ಮ ಐಡಿ ಕಾರ್ಡ್ ಹಾಕಿಕೊಂಡು ಖುಷಿ ಪಡಬೇಕು ಎಂಬ ಉದ್ದೇಶದಿಂದ ಎಲ್ಲ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ನೀಡಿದ್ದೇವೆ. ಶಾಲೆಯ ಅಭಿವೃದ್ಧಿಯ ಬಗ್ಗೆ ಮುಂದೆಯೂ ಹಲವಾರು ಯೋಜನೆಗಳಿದ್ದು ಮುಂದಿನ ದಿನಗಳಲ್ಲಿ ಅವುಗಳನ್ನೂ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕನ್ನಡ ಮಾಧ್ಯಮ ಎಂಬ ಬಗ್ಗೆ ಯಾರೂ ಕೇವಲವಾಗಿ ಯೋಚಿಸಬೇಡಿ. ಕನ್ನಡ ಮಾಧ್ಯಮದಲ್ಲೇ ಓದಿ ಐಎಎಸ್, ಐಪಿಸ್ ಸೇರಿದಂತೆ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಎಲ್ಲರೂ ಚೆನ್ನಾಗಿ ಕಲಿತು ದೊಡ್ಡ ದೊಡ್ಡ ಹುದ್ದೆ ಹೋಗುವಂತಾಗಲಿ. ಆದರೆ ಹೀಗೆ ಎತ್ತರಕ್ಕೆ ಬೆಳೆದ ಮೇಲೆ ಶಾಲೆಯನ್ನು ಮಾತ್ರ ಎಂದಿಗೂ ಮರೆಯಬೇಡಿ. ನೀವು ಕಲಿತ ಶಾಲೆಯ ಅಭಿವೃದ್ಧಿಗೆ ಮುಂದೆ ನೀವೂ ನೆರವಾಗಿ ಎಂದು ಕಿವಿಮಾತು ಹೇಳಿದರು.
ಶಿರವಾಡ ಗ್ರಾಪಂ ಅಧ್ಯಕ್ಷೆ ಅಶ್ವಿನಿ ಬಾಂದೇಕರ ಹಾಗೂ ಉಪಾಧ್ಯಕ್ಷ ದಿಲೀಪ ನಾಯ್ಕ ದಂಪತಿ ಶಾಲೆಯ ಎಲ್‌ಕೆಜಿ ಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸೇರಿ ಸುಮಾರು 400 ಗುರುತಿನ ಚೀಟಿಗಳನ್ನು ಕೊಡುಗೆಯಾಗಿ ನೀಡಿದರು. ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ರಾಜಶ್ರೀ ನಾಯಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಧ್ರುವ ಆಗೇರ ಅವರು ಶಾಲಾ ಮಕ್ಕಳಿಗೆ ಗುರುತಿನ ಚೀಟಿ ಕೊಡುಗೆಯಾಗಿ ನೀಡಿರುವುದಕ್ಕೆ ಶಿರವಾಡ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಸಂದೀಪ ನಾಯ್ಕ, ಸದಸ್ಯರು, ಶಿಕ್ಷಕರು ಹಾಜರಿದ್ದರು.