ಹಳಿಯಾಳ: ಕೆಎಲ್‌ಎಸ್ ವಿಡಿಐಟಿಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ, ತಂತ್ರಜ್ಞಾನವು ಜಗತ್ತನ್ನು ಆಳುತ್ತಿದ್ದು, ವಿಜ್ಞಾನಿಗಳು ಹಾಗೂ ಇಂಜಿನಿಯರ್‌ಗಳು ಹೊಸ ಆವಿಷ್ಕಾರಕ್ಕೆ ಕಾರಣೀಭೂತರಾಗಿದ್ದಾರೆ. ಮಹಾವಿದ್ಯಾಲಯವು ಉತ್ತಮ ನಾಗರಿಕ ಇಂಜಿನಿಯರ್‌ಗಳನ್ನು ರೂಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುವ ವಾತಾವರಣವನ್ನು ನಿರ್ಮಿಸಿದೆ ಎಂದು ಹೇಳಿದರು.
ವಿದ್ಯಾಲಯದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಪ್ರಥಮ ವರ್ಷಕ್ಕೆ ಅಣಿಯಾಗಿರುವ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಹಾವಿದ್ಯಾಲಯವು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದರಿಂದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯು ‘ಎ’ ಶ್ರೇಯಾಂಕವನ್ನು ನೀಡಿದೆ ಎಂದು ಹೇಳಿದರು.
ಡಾ.ಸಮೀರ್ ಗಲಗಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ದೇಶ ಕಂಡ ಅತ್ಯುತ್ತಮ ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ನಮ್ಮೆಲ್ಲರಿಗೆ ಸ್ಫೂರ್ತಿ. ಅವರಂತೆ ನಾವೆಲ್ಲ ಸಮಾಜಕ್ಕೆ ಕೊಡುಗೆ ನೀಡಬೇಕು. ಸತತ ಪರಿಶ್ರಮದಿಂದ ಸಮಾಜಕ್ಕೆ ಉಪಯುಕ್ತವಾಗುವ ವಿನೂತನ ಆವಿಷ್ಕಾರಗಳನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.
ಶೈಕ್ಷಣಿಕ ವಿಭಾಗದ ಡೀನ್ ಪ್ರೊ.ಪೂರ್ಣಿಮಾ ರಾಯ್ಕರ್, ಇಂಜಿನಿಯರಿ0ಗ್ ಕ್ಷೇತ್ರದಲ್ಲಿ ಬಳಸುತ್ತಿರುವ ಅತ್ಯಾಧುನಿಕ ತಂತ್ರಾ0ಶಗಳ ಕುರಿತು ಮಾಹಿತಿ ನೀಡಿದರು. ವಿಟಿಯು ನಿರ್ದೇಶನನುಸಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮವನ್ನು ಸೆ.15ರವರೆಗೆ ಆಯೋಜಿಸಲಾಗಿದೆ. ಪರಿಣಿತರ ಉಪನ್ಯಾಸ, ವಿವಿಧ ವಿಭಾಗಗಳ ಕಾರ್ಯ ವೀಕ್ಷಣೆ, ಕೈಗಾರಿಕೆಗಳಿಗೆ ಭೇಟಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸ್ವಾಗತ ಸಮಾರಂಭದಲ್ಲಿ ಎಲ್ಲಾ ವಿಭಾಗದ ಡೀನ್‌ಗಳು, ವಿಭಾಗ ಮುಖ್ಯಸ್ಥರು, ಬೋಧಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.