ಯಲ್ಲಾಪುರ: ನಮ್ಮ ಭಾರತೀಯ ಸಂಸ್ಕೃತಿಗೆ ವಿಶಿಷ್ಟವಾದ ಸ್ಥಾನ ಇದೆ. ಪಾಲಕರು ತಮ್ಮ ಮಕ್ಕಳನ್ನು ದೇವರೆಂದು, ದೇವರಂತೆ ಮಾಡಿ ಅವರನ್ನು ನೋಡಿ ಆನಂದ ಪಡುವ ಒಂದು ಸನ್ನಿವೇಶ ಇಂದು ನಾವು ಕಾಣುತ್ತಿದ್ದೇವೆ ಎಂದು ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಹೇಳಿದರು.
ಲಯನ್ಸ್ ಕ್ಲಬ್ ಮತ್ತು ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಕೃಷ್ಣಾಷ್ಠಮಿಯ ಅಂಗವಾಗಿ ಹಮ್ಮಿಕೊಂಡ ಬಾಲ ಗೋಪಾಲ, ರಾಧಾಕೃಷ್ಣ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ಮಕ್ಕಳಿಗೆ ಸಂಸ್ಕಾರ ನೀಡುವ ಹೊಣೆ ಪಾಲಕರ ಮೇಲಿದೆ. ಇಂತಹ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳನ್ನು ತೊಡಗಿಸಿ, ಪ್ರೇರೇಪಿಸಿ ಭಾಗಿಯಾದಾಗ ಮಕ್ಕಳಿಗೆ ಸಾತ್ವಿಕತನದ ಸಂಸ್ಕಾರವಾಗುತ್ತದೆ. ಬೃಹತ್ ಸಂಖ್ಯೆಯಲ್ಲಿ ಇಷ್ಟೊಂದು ಪಾಲಕರು, ಅದರಲ್ಲೂ ತಾಯಂದಿರು ತಮ್ಮ ಮಕ್ಕಳ ಮೇಲಿನ ವಾತ್ಸಲ್ಯದ ಪ್ರತೀಕವನ್ನು ಕಾಣಬಹುದಾಗಿದೆ ಎಂದರು.
ಕೆಜೆಯು ತಾಲೂಕು ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ, ನಮ್ಮ ಮಕ್ಕಳಿಗೆ ಇಂದು ಸಾತ್ವಿಕ ಸಂಸ್ಕಾರದ ತೀರಾ ಅಗತ್ಯತೆಯಿದೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸುವಂತೆ ಪ್ರೇರೇಪಿಸುವುದರಿಂದ ಅವರ ಭವಿಷ್ಯದಲ್ಲಿ ಸನ್ಮಾರ್ಗಕ್ಕೆ ನಾಂದಿಯಾಗುತ್ತದೆ. ಮತ್ತು ಚಿಕ್ಕ ಮಕ್ಕಳಿರುವಾಗಲೇ ಇಂತಹ ವೇದಿಕೆಗಳಲ್ಲಿ ಭಾಗವಹಿಸುವುದರಿಂದ ಅವರಲ್ಲಿರುವ ಭಯ, ಆತಂಕ ದೂರವಾಗುತ್ತದೆ. ಹಾಗಾಗಿಯೇ ಮಕ್ಕಳಿಗೆ ಚಿಕ್ಕವರಿದ್ದಾಗಲೇ ಸನ್ಮಾರ್ಗದ ದಾರಿ ತೋರಬೇಕೆಂದು ಹಿರಿಯರು ಹೇಳುವುದು ಪರಂಪರೆಯಿ0ದ ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ ಬೋಳ್ಕರ್ ಮಾತನಾಡಿ, ನಾವು ನಮ್ಮ ಪಾಲಕರಿಗೆ ಮಕ್ಕಳನ್ನು ಇಂತಹ ವೇದಿಕೆ ಮೂಲಕ ಅವಕಾಶ ನೀಡಿದಾಗ ಅವರ ಸಾಮರ್ಥಕ್ಕೆ ಅನುಗುಣವಾಗಿ ತಮ್ಮ ಜೀವನ ರೂಪಿಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದರು. ಕೆಜೆಯು ರಾಜ್ಯ ಸಮಿತಿ ಸದಸ್ಯ ನಾಗರಾಜ ಮದ್ಗುಣಿ ಸ್ವಾಗತಿಸಿದರು. ಲಯನ್ಸ್ನ ಶೇಷಗಿರಿ ಪ್ರಭು ನಿರ್ವಹಿಸಿ ವಂದಿಸಿದರು.