ಹಳಿಯಾಳ: ಕ್ಷೇತ್ರಾದ್ಯಂತ ಕಡಿಮೆ ಮಳೆಯಾಗಿದ್ದು, ಬರಗಾಲದ ಛಾಯೆ ಆವರಿಸಿದೆ. ಭತ್ತ, ಕಬ್ಬು, ಗೋವಿನಜೋಳ ಸಂಪೂರ್ಣ ಫಸಲು ನಷ್ಟವಾಗುವ ಹಂತಕ್ಕೆ ತಲುಪಿದ್ದು, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ, ಕಂದಾಯ ಮಂತ್ರಿಗಳ ಭೇಟಿ ಮಾಡಿ ರೈತರ ಹಿತ ಗಮನದಲ್ಲಿಟ್ಟುಕೊಂಡು ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿದ್ದೇನೆ ಎಂದು ಶಾಸಕ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲ ಘೋಷಿಸಿದರೆ ಸಾಲ ಮನ್ನಾ ಸೌಲಭ್ಯ ಸೇರಿದಂತೆ ಇತರ ಪರಿಹಾರ ದೊರೆತು ರೈತರಿಗೆ ಸ್ವಲ್ಪ ಸಹಕಾರಿಯಾಗಲಿದೆ. ಸದ್ಯಕ್ಕೆ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲವಾಗಿದೆ. ಸರ್ಕಾರದ ಸಾಕಷ್ಟು ಹಣ ಗ್ಯಾರಂಟಿ ಯೋಜನೆಗಳಿಗೆ ತಗುಲುತ್ತಲಿರುವ ಕಾರಣ ಅಭಿವೃದ್ಧಿಗೆ ಬೇಕಾದಷ್ಟು ಹಣ ಬರುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಗೊತ್ತಿದ್ದು, ಸದ್ಯದಲ್ಲೇ ಈ ಬಗ್ಗೆ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಅಭಿವೃದ್ದಿಗೆ ವೇಗ ನೀಡಲಾಗುವುದು ಎಂದರು.
ಅಳ್ನಾವರದಿoದ ದಾಂಡೇಲಿಯ ಅಂಬೇವಾಡಿಗೆ ಇದ್ದ ರೈಲು ಸೇವೆ ಸ್ಥಗಿತವಾಗಿದೆ. ಈ ಬಗ್ಗೆ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಮತ್ತು ಅಶ್ವಿನ್ ವೈಷ್ಣವ ಅವರ ಜೊತೆ ಮಾತನಾಡಿದ್ದು, ದಾಂಡೇಲಿಯಲ್ಲಿಯ ರೈಲು ನಿಲ್ದಾಣಕ್ಕೆ ಅಂಬೇವಾಡಿ ಬದಲು ದಾಂಡೇಲಿ ಎಂದು ಹೆಸರು ಬದಲಾಯಿಸಬೇಕು. ಜೊತೆಗೆ ಧಾರವಾಡದಿಂದ ದಾಂಡೇಲಿಯವರೆಗೆ ಸಮಯದಲ್ಲಿ ಕೂಡ ಬದಲಾವಣೆ ಮಾಡಿ ಪ್ಯಾಸೆಂಜರ್ ರೈಲನ್ನು ಪುನಃ ಪ್ರಾರಂಭಿಸುವoತೆ ಒತ್ತಾಯಿಸಿದ್ದು, ಮಂತ್ರಿಗಳಿoದ ಉತ್ತಮ ಪ್ರತಿಕ್ರಿಯೆಯೂ ದೊರಕಿದೆ ಎಂದರು.
ಕ್ಷೇತ್ರಕ್ಕೆ ಪ್ರಕೃತಿ ವಿಕೋಪದಲ್ಲಿ 5 ಕೋಟಿ ಮತ್ತು ಮಲೆನಾಡು ಅಭೀವೃದ್ಧಿ ಯೋಜನೆಯಲ್ಲಿ 35 ಲಕ್ಷ ರೂ. ಮಂಜೂರಾಗಿದೆ ಜೊತೆಗೆ ಶಾಸಕರ ಅನುದಾನದಲ್ಲಿ ಕೂಡ 50 ಲಕ್ಷ ಬಿಡುಗಡೆಯಾಗಿದ್ದು, ಕ್ರಿಯಾಯೋಜನೆ ಸಲ್ಲಿಸಲಾಗಿದ್ದು ಸದ್ಯದಲ್ಲೇ ಸಂಬ0ಧಿಸಿದ ಕಾಮಗಾರಿಗಳು ಆರಂಭವಾಗಲಿವೆ. ಹಳಿಯಾಳ- ದಾಂಡೇಲಿ- ಜೊಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಕಚೇರಿಗಳು ಸರಿಯಾದ ಸಮಯಕ್ಕೆ ತೆರೆಯದೇ ಇರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ಹಠಾತ್ ಭೇಟಿ ನೀಡುವ ಕಾರ್ಯಕ್ರಮ ಮೇಲಿಂದ ಮೇಲೆ ಮಾಡುತ್ತಿದ್ದು, ಯಾವುದೇ ಇಲಾಖೆಗೆ ನಾನು ಭೇಟಿ ಪರಿಶೀಲನೆ ನಡೆಸಬಹುದು. ಹೀಗಾಗಿ ಸರ್ಕಾರದ ನಿಯಮಾವಳಿಯಂತೆ ಬೆಳಿಗ್ಗೆ 10 ಗಂಟೆಗೆ ಕಚೇರಿಗಳು ತೆರೆದು ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯ ಇರಬೇಕು. ಮಾತ್ರವಲ್ಲದೇ ಅಧಿಕಾರಿ ಮತ್ತು ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಿರದೇ ಕರ್ತವ್ಯಲೋಪ ಎಸಗಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಗಂಭೀರ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.