ಗೋಕರ್ಣ: ಸೇವೆಯಲ್ಲಿ ಸಿಗುವ ಸಂತೃಪ್ತಿ, ಸಮಾಧಾನ ಯಾವುದರಲ್ಲೂ ಸಿಗಲಾರದು. ಇದು ನಮ್ಮ ಜೀವಕ್ಕೆ ಸಮಾಧಾನ ನೀಡುವಂಥದ್ದು. ದೇಶದ ಭವ್ಯ ಸಂಸ್ಕೃತಿ, ಸದಾಚಾರ, ಸಂಪ್ರದಾಯ ಉಳಿಯಬೇಕಾದರೆ ನಾವೆಲ್ಲ ತ್ಯಾಗದ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಶುಕ್ರವಾರ ಬೆಂಗಳೂರಿನ ರಾಜಾ ಮಲ್ಲೇಶ್ವರ, ಮಹಾಲಕ್ಷ್ಮಿ ಮತ್ತು ಸರ್ವಜ್ಞ ವಲಯಗಳಿಂದ ಆಗಮಿಸಿದ ಶಿಷ್ಯಭಕ್ತರಿಂದ ಶ್ರೀಗುರುಭಿಕ್ಷಾ ಸೇವೆ ಸ್ವೀಕರಿಸಿ ಮಾರ್ಗದರ್ಶನ ನೀಡಿದರು.
ಪ್ರತಿ ವರ್ಷದ ಚಾತುರ್ಮಾಸ್ಯ ಎನ್ನುವುದು ಎಲ್ಲ ಶಿಷ್ಯರಿಗೆ ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣಕ್ಕಾಗಿ ಶಕ್ತಿ ತುಂಬುವ ಸುಸಂದರ್ಭ. ಕುಟುಂಬಕ್ಕೆ ಮಾತ್ರವಲ್ಲದೇ ಸಮಾಜಕ್ಕೆ, ದೇಶಕ್ಕೆ ಒಳಿತಾಗುವಂತೆ ಶ್ರೀಮಠದ ಸೇವಾ ಚಟುವಟಿಕೆಗಳಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಸ್ವಾರ್ಥಿಯಾಗಿ ಬದುಕದೇ ಸಮಾಜಕ್ಕಾಗಿ ಬದುಕುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಸಾಧನೆ, ಸೇವೆ ಮತ್ತು ಸಂಕಟವನ್ನು ಗುರುತಿಸುವ ಮೂರು ಕಣ್ಣುಗಳೊಂದಿಗೆ ಕಾರ್ಯ ನಿರ್ವಹಿಸಿ ಎಂದು ಕರೆ ನೀಡಿದರು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಬೆಂಗಳೂರು ಪ್ರಾಂತ ಉಪಾಧ್ಯಕ್ಷ ಜಿ.ಜಿ.ಹೆಗಡೆ ತಲಕೇರಿ, ಮಾತೃಪ್ರಧಾನರಾದ ವೀಣಾ ಜಿ ಪುಳು, ಉತ್ತರ ಬೆಂಗಳೂರು ಮಂಡಲ ಕಾರ್ಯದರ್ಶಿ ರಾಮಮೂರ್ತಿ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ.ಭಟ್, ವಿವಿವಿ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಉಪಸ್ಥಿತರಿದ್ದರು. ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 16 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.