ಸಿದ್ದಾಪುರ: ಪಟ್ಟಣದ ಶ್ರೀಲಕ್ಷ್ಮೀನಾರಾಯಣ ದೇವಾಲಯದಲ್ಲಿ ನಡೆದ ದೈವಜ್ಞ ಬ್ರಾಹ್ಮಣ ಯುವಕ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ 49ನೇ ಗಣೇಶೋತ್ಸವವನ್ನು ವಿಜೃಂಭಣೆಯಿ0ದ ಆಚರಿಸಲು ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ದೈವಜ್ಞ ಸಮಾಜಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಶಾಂತರಾಮ್ ವಿ.ಶೇಟ್ ಮಾತನಾಡಿ, ಶ್ರೀಲಕ್ಷ್ಮೀನಾರಾಯಣ ದೇವರ ಅನುಗ್ರಹ, ಶ್ರೀಸಚ್ಚಿದಾನಂದ ಜ್ಞಾನೇಶ್ವರ ಸ್ವಾಮಿಗಳ ಕ್ರಪಾಶೀರ್ವಾದ ಹಾಗೂ ಸಮಾಜ ಬಾಂಧವರೆಲ್ಲರ ಸಹಕಾರದಿಂದ ಯುವಕ ಮಂಡಳಿಯವರು ಗಣೇಶೋತ್ಸವವನ್ನು ಆಚರಿಸುತ್ತಾ ಬಂದಿದ್ದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಯುವಕ ಮಂಡಳಿಯ ಅಧ್ಯಕ್ಷ ಪ್ರಶಾಂತ ಡಿ.ಶೇಟ್, ಹಿಂದಿನ ವರ್ಷದ ಗಣೇಶೋತ್ಸವದ ಜಮಾ ಖರ್ಚಿನ ವಿವರವನ್ನು ಮಂಡಿಸಿ, ಪ್ರಾಸ್ತಾವಿಕ ಮಾತನಾಡಿದರು. ಈ ಗಣೇಶೋತ್ಸವದ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳು, ಏಳು ದಿನದ ಪೂಜಾ ಕಾರ್ಯಕ್ರಮ, ಮಹಿಳಾ ಮಂಡಳಿಯಿ0ದ ಲಲಿತ ಸಹಸ್ರನಾಮ ಪಠಣ,ಭಜನೆ,ವಿಶೇಷವಾಗಿ ಗಣ ಹೋಮ ಅನ್ನ ಸಂತರ್ಪಣೆ, ವಿಸರ್ಜನಾ ಕಾರ್ಯಕ್ರಮ, ಅನಂತನೋಪಿ ಪುಷ್ಪಾಲಂಕಾರ ಹಾಗೂ ಸಭಾ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಜರುಗಲಿದೆ ಎಂದರು.
ದೈವಜ್ಞ ಸಮಾಜಾಭಿವೃದ್ಧಿ ಮಂಡಳಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ.ರಾಯಕರ, ಕೋಶಾಧ್ಯಕ್ಷ ಚಂದ್ರಹಾಸ್ ಜಿ.ಶೇಟ್, ಸಹ ಕಾರ್ಯದರ್ಶಿ ರಮೇಶ್ ಜಿ.ಶೇಟ್, ವಾಸುದೇವ್ ಎಸ್.ಶೇಟ್, ವೇದಮೂರ್ತಿ ನಾಗರಾಜ ಎಸ್.ಭಟ್ ಉಪಸ್ಥಿತರಿದ್ದು, ಮುಂದಿನ ವರ್ಷ 50ರ ಸಂಭ್ರಮದ ಸುವರ್ಣ ಮಹೋತ್ಸವ ಕಾರ್ಯಕ್ರಮ ಇರುವುದರಿಂದ ಆ ಸುವರ್ಣ ಮಹೋತ್ಸವ ವಿಜ್ರಂಭಣೆಯಿ0ದ ಆಚರಿಸಿ ನೆನಪಿಡುವಂತಹ ಕಾರ್ಯಕ್ರಮ ಆಗಬೇಕೆಂದರು. ಇದಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದರು.
ಈ ಸಂದರ್ಭದಲ್ಲಿ ಯುವಕ ಸಂಘದ ಉಪಾಧ್ಯಕ್ಷ ಮಹೇಶ್ ವಿ.ಶೇಟ್ ವಿದ್ಯಾ ಪ್ರೋತ್ಸಾಹ ನಿಧಿ ಸಮಿತಿಯ ಲೆಕ್ಕಪತ್ರವನ್ನು ಮಂಡಿಸಿ, ಪ್ರತಿಭಾ ಪುರಸ್ಕಾರದ ಕುರಿತು ವಿವರಿಸಿ ಆಭಾರ ಮನ್ನಿಸಿದರು. ಸಭೆಗೆ ಆಗಮಿಸಿದ ಎಲ್ಲಾ ಸಮಾಜ ಬಾಂಧವರು 49ನೆಯ ಗಣೇಶೋತ್ಸವ ಅತ್ಯಂತ ಯಶಸ್ವಿಯಾಗಿ ಹಾಗೂ ವಿಜೃಂಭಣೆಯಿ0ದ ಜರುಗಲಿ ಎಂದು ಶುಭ ಹಾರೈಸಿದರು.