ಶಿರಸಿ: ಪರಿಸರ ಜಾಗೃತೆ ಮತ್ತು ಅರಣ್ಯ ಸಾಂದ್ರತೆ ಹೆಚ್ಚಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಕಾರ್ಯಕ್ಕೆ ಕಾನೂನು ಮತ್ತು ಸಂಸದೀಯ ಸಚಿವರಾಗಿರುವ ಹೆಚ್.ಕೆ.ಪಾಟೀಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸೆ. 14ರಂದು ಬೆಂಗಳೂರಿನಲ್ಲಿ ಜರಗುವ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಪೋಟೋ ಪ್ರದರ್ಶನ ಮತ್ತು ರಾಜ್ಯ ಸರಕಾರದ ಸಂಬಂಧಿಸಿದ ಹಿರಿಯ ಸಚಿವರೊಂದಿಗೆ ಅರಣ್ಯವಾಸಿಗಳ ಸಂವಾದದ ಕಾರ್ಯಕ್ರಮಕ್ಕೆ ಆಗಮಿಸಲು ಅವರನ್ನು ಗದಗದಲ್ಲಿ ಹೋರಾಟಗಾರರ ವೇದಿಕೆಯು ಭೇಟಿಯಾದ ಸಮಯದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅರಣ್ಯ ಭೂಮಿ ಹಕ್ಕು ಹೋರಾಟದ ಜೊತೆಯಲ್ಲಿ ಪರಿಸರ ಜಾಗೃತೆ ಕಾರ್ಯವನ್ನು ಸಹಿತ ಅರಣ್ಯವಾಸಿಗಳು ಹಮ್ಮಿಕೊಂಡಿರುವುದು ವಿಶೇಷ. ಇಂತಹ ಕಾರ್ಯಗಳು ಸಮಾಜದ ಇತರರಿಗೂ ಮಾದರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿ, ಸೆ.14 ರಂದು ಬೆಂಗಳೂರಿನಲ್ಲಿ ಜರುಗುವ ಹೋರಾಟಗಾರರ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ನಿಯೋಗಕ್ಕೆ ಅವರು ಆಶ್ವಾಸನೆ ನೀಡಿದರು.