ಶಿರಸಿ: ಸಾಂಸ್ಕೃತಿಕ ಹಾಗೂ ಸಾಹಿತ್ಯ ಚಟುವಟಿಕೆಗಳು ಕನ್ನಡದ ಬೆಳೆವಣಿಗೆಗೆ ಸಹಕಾರಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ರವಿವಾರ ರಾತ್ರಿ ನಗರದ ಟಿಎಂಎಸ್ ಸಭಾಂಗಣದಲ್ಲಿ ಸಿದ್ದಾಪುರದ ರಂಗ ಸೌಗಂಧ ಕಲಾ ತಂಡದವರು ಪ್ರದರ್ಶಿಸಿದ ಎನ್.ಎಸ್.ರಾವ್ ಮೂಲ ರಚನೆಯ, ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ 36 ಅಲ್ಲ 63 ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ಕಲೆ, ಸಾಹಿತ್ಯ,ಸಂಸ್ಕೃತಿಗಳನ್ನು ಮರೆಯದೇ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು.ನಮ್ಮ ನಾಟಕ, ಯಕ್ಷಗಾನಗಳು ಕನ್ನಡದ ಬೆಳವಣಿಗೆಗೆ ಸಹಾಯಕಾರಿಯಾಗಲಿದೆ. ಸರಕಾರ, ಸಂಸ್ಥೆಗಳು, ಪ್ರೇಕ್ಷಕರು ಒಟ್ಟಾಗಿ ಅಂಥ ಚಟುವಟಿಕೆಗೆ ಬೆಂಬಲಿಸಬೇಕು ಎಂದ ಭೀಮಣ್ಣ, ಹೆಚ್ಚುತ್ತಿರುವ ಆಂಗ್ಲ ಭಾಷಾ ವ್ಯಾಮೋಹದ ಜೊತೆ ಕನ್ನಡ ಉಳಿಸುವ , ಜಾಗೃತಗೊಳಿಸುವ ಕೆಲಸ ಆಗಬೇಕು ಎಂದೂ ಹೇಳಿದರು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಒಂದು ಕಾಲ ಇತ್ತು. ಟಿವಿ ಮಾಧ್ಯಮಗಳಿಂದ ರಂಗಭೂಮಿಯ ಚಟುವಟಿಕೆಗಳಿಗೆ ಪ್ರೇಕ್ಷಕರ ಕೊರತೆ ಆಗುತ್ತಿತ್ತು. ಆದರೆ, ಈಗ ಹಾಗಿಲ್ಲ. ಕಾಲ ಬದಲಾಗಿದೆ. ಹೊಸ ತಲೆಮಾರಿನ ಪ್ರೇಕ್ಷಕರ, ಕಲಾವಿದರ ಸೃಷ್ಟಿ ಕೂಡ ಆಗಬೇಕು ಎಂದೂ ಹೇಳಿದರು.
ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ, ಕನ್ನಡಾಂಬೆಯ ತ್ರಿಕಾಲ ಪೂಜೆ ಭುವನಗಿರಿಯಲ್ಲಿ ಆಗುತ್ತಿದೆ. ಅಲ್ಲಿ ಸರಕಾರದಿಂದ ಕನ್ನಡದ ಅಸ್ಮಿತೆಗಾಗಿ ರಾಜ್ಯ ಅಥವಾ ಜಿಲ್ಲಾ ಮಟ್ಟದ ಕನ್ನಡದ ಉತ್ಸವ ಆಗಬೇಕು ಎಂದು ಹೇಳಿದರು.
ನಿರ್ದೇಶಕ ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು. ಶ್ರೀಪಾದ ಹೆಗಡೆ ವಂದಿಸಿದರು.
ಬಳಿಕ ಪ್ರದರ್ಶನ ಕಂಡ ಒಂದು ಮುಕ್ಕಾಲು ಗಂಟೆಯ 36 ಅಲ್ಲ 63 ನಾಟಕ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸುವ ಜೊತೆಗೆ ಒಂದಾಗಿ ಹೋಗುವ ಸಂಗತಿಯನ್ನೂ ಬಿಂಬಿಸಿತು. ಇಡೀ ನಾಟಕ ಹವಿಗನ್ನಡದಲ್ಲಿ ಪ್ರದರ್ಶನ ಕಂಡಿದ್ದು, ಐವರು ಕಲಾವಿದರು ರಂಗದಲ್ಲಿ ಕಾಣಿಸಿಕೊಂಡು ಮೆಚ್ಚುಗೆಗೆ ಪಾತ್ರರಾದರು. ಒಬ್ಬವ ಮರಗುಳಿ, ಇನ್ನೊಬ್ಬವ ಕೆಪ್ಪ, ಅಡುಗೆ ಭಟ್ಟರು ಉಗ್ಗುವಿಕೆ, ಕಾಲೇಜು ಹುಡುಗ, ಹುಡುಗಿ ಪಾತ್ರದಲ್ಲಿ ನಾಟಕ ಅಬಾಲ ವೃದ್ಧರಿಗೂ ಇಷ್ಟವಾಯಿತು.
ರಂಗದಲ್ಲಿ ಗಣಪತಿ ಹೆಗಡೆ ಗುಂಜಗೋಡ, ನಾಗಪತಿ ಭಟ್ಟ ವಡ್ಡಿನಗದ್ದೆ, ಅಜಿತ್ ಭಟ್ಟ ಹೆಗ್ಗಾರಳ್ಳಿ, ಶ್ರೀಪಾದ ಹೆಗಡೆ ಕೋಡನಮನೆ, ಪ್ರವೀಣಾ ಹೆಗಡೆ ಗುಂಜಗೋಡ ಕಾಣಿಸಿಕೊಂಡರೆ, ರಂಗ ವಿನ್ಯಾಸವನ್ನು ಶ್ರೀಪಾದ ಹೆಗಡೆ ಕೋಡನಮನೆ, ಸಂಗೀತ ನಿರ್ದೇಶನ ರಾಜೇಂದ್ರ ಕೊಳಗಿ, ಸಂಗೀತ ನಿರ್ವಹಣೆಯನ್ನು ನಾಗರಾಜ್ ಜೋಗಿ, ದತ್ತಾತ್ರಯ ಹೆಗಡೆ ಹಾರ್ಸಿಕಟ್ಟ, ಧ್ವನಿ ಬೆಳಕನ್ನು ಉದಯ ಸೌಂಡ್ಸ ನಿರ್ವಹಿಸಿದರು. ರಂಗ ಪ್ರದರ್ಶನದ ಬಳಿಕ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ, ಪತ್ರಕರ್ತ ಶಿವಾನಂದ ಕಳವೆ, ಭಾಗಿರಥಿ ಕರಿ ಇತರರು ಅನಿಸಿಕೆ ವ್ಯಕ್ತಪಡಿಸಿದರು.
12 ದಿನಕ್ಕೆ 3ನೇ ಪ್ರದರ್ಶನ!
ಕಳೆದ ಆಗಷ್ಟ 15ರಂದು ಸಿದ್ದಾಪುರದಲ್ಲಿ ಪ್ರಥಮ ಪ್ರದರ್ಶನ ಕಂಡಿದ್ದ ಈ ನಗೆ ನಾಟಕ ಎರಡನೇ ಪ್ರದರ್ಶನ ಭುವನಗಿರಿ ದೇವಸ್ಥಾನದಲ್ಲಿ ಕಂಡು, ಮೂರನೇ ಪ್ರದರ್ಶನ ಶಿರಸಿಯಲ್ಲಿ ನಡೆದಿದೆ. ಎಲ್ಲ ಕಡೆ ಹೌಸ್ ಫುಲ್ ಆಗಿದ್ದು, ಕೇವಲ 12ನೇ ದಿನದಲ್ಲಿ 3 ಪ್ರದರ್ಶನ ಕಂಡಿದ್ದು, ರಂಗ ಭೂಮಿಯಲ್ಲಿ ಹೊಸ ಕುತೂಹಲ ಮೂಡಿಸಿದೆ.