ಶಿರಸಿ: ಇಲ್ಲಿನ ಪ್ರತಿಷ್ಠಿತ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಎಂಇಎಸ್ ಸಂಸ್ಥೆಯ ಮೂರು ವಿದ್ಯಾರ್ಥಿನಿಯರ ವಸತಿ ನಿಲಯಗಳ ಪಾಲಕರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಸರ್ಕಾರದ ಯಾವುದೇ ಆರ್ಥಿಕ ನೆರವಿಲ್ಲದೆ ನಾವು ವಸತಿ ನಿಲಯಗಳನ್ನು ನಡೆಸುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಸಾತ್ವಿಕ ಆಹಾರ ನೀಡುವ ಮೂಲಕ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗುವಂತೆ ನೋಡಿಕೊಳ್ಳುತ್ತಿದ್ದೇವೆ. ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಪೂರಕ ವಾತಾವರಣವನ್ನು ನಾವು ನಿರ್ಮಿಸಿದ್ದೇವೆ. ಮೊಬೈಲ್ ಅನ್ನು ಬಳಸುವಿಕೆ ಮಕ್ಕಳಲ್ಲಿ ಇನ್ನು ಕಡಿಮೆಯಾಗಬೇಕಿದೆ. ಆ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ತಿಳಿಹೇಳುವ ಪ್ರಯತ್ನವನ್ನು ಮಾಡಬೇಕು ಎಂದರು.
ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ. ಭಾಗವತ್, ಮಾತನಾಡಿ ಪಾಲಕರು ಪೋಷಕರು ಕಾಲೇಜಿನ ಜೊತೆಗೆ ನಿರಂತರ ಸಂಪರ್ಕ ಹೊಂದಿರಬೇಕು. ಇದರಿಂದ ಮಹಾವಿದ್ಯಾಲಯದ ಅಭಿವೃದ್ಧಿ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹೆಚ್ಚಲು ಸಾಧ್ಯವಾಗುತ್ತದೆ. ಅವರ ಸಲಹೆ ಸೂಚನೆಗಳು ಬಹಳ ಮಹತ್ವವನ್ನು ಹೊಂದಿದೆ. ಹಾಸ್ಟೆಲ್ ನಲ್ಲಿ ಅನೇಕ ಆಹಾರ ಪದ್ಧತಿ, ಸಂಸ್ಕೃತಿ, ಮತದ ವಿದ್ಯಾರ್ಥಿಗಳು ಒಂದೆಡೆ ಸೇರುತ್ತಾರೆ. ಎಲ್ಲರೂ ಹೊಂದಿಕೊಳ್ಳುವ ಗುಣವನ್ನು, ಸಾಮಾಜಿಕ ಸಮಾನತೆಯನ್ನು ಈ ಮೂಲಕ ನಾವಿಲ್ಲಿ ಕಾಣಬಹುದು. ಎಂದರು.
ಹಾಸ್ಟೆಲ್ ಸಮಿತಿ ಅಧ್ಯಕ್ಷ ಜಿ.ಎನ್. ಹೆಗಡೆ ಮುರೇಗಾರ್ ಮಾತನಾಡಿ ಎಂಇಎಸ್ ಸಂಸ್ಥೆ ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿದ್ದು ಇನ್ನೂ ಉತ್ತುಂಗಕ್ಕೆರಲು ಈ ಸಭೆಯನ್ನು ಕರೆಯಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಂಇಎಸ್ ನ ಖಜಾಂಚಿ ಸುಧೀರ್ ಭಟ್, ಹಾಸ್ಟೆಲ್ ಸಮಿತಿ ಸದಸ್ಯ ಶ್ರೀಧರ್ ನಾಯಕ್, ವಿವಿಧ ವಿದ್ಯಾಲಯಗಳ ಪ್ರಾಚಾರ್ಯರು ಉಪಸ್ಥಿತರಿದ್ದರು. ಎಂಎಂ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಸ್ವಾಗತಿಸಿ ಪ್ರಾಸ್ತಾವಿಸಿದರು. ಗ್ರಂಥ ಪಾಲಕಿ ಶಾರದಾ ಭಟ್ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಮೂರು ಹಾಸ್ಟೆಲಿನ ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡು ಆಡಳಿತ ಮಂಡಳಿಯೊಂದಿಗೆ ಸಂವಾದ ನಡೆಸಿದರು.