ಅಂಕೋಲಾ: ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಮನೆಯಂಗಳದ ಕಾರ್ಯಕ್ರಮದ ಅಂಗವಾಗಿ ಅಂಬಾರಕೊಡ್ಲದ ಪರಿಮಳದ ಅಂಗಳದಲ್ಲಿ ಕವಿ ವಿಷ್ಣು ನಾಯ್ಕ ಅವರ ‘ಸಮಗ್ರ ಕಾವ್ಯ-2’ರ ಕೃತಿಯ ಲೋಕಾರ್ಪಣೆ ಸಂಪನ್ನಗೊ0ಡಿತು. ಹಿರಿ-ಕಿರಿಯ ಸಾಹಿತಿ ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಪ್ರಾಚಾರ್ಯ ಫಾಲ್ಗುಣ ಗೌಡ ಈ ಕೃತಿಯನ್ನು ಬಿಡುಗಡೆಗೊಳಿಸಿದರು. ಕೃತಿಯ ಕುರಿತು ಮಾತನಾಡುತ್ತ, ವಿಷ್ಣು ನಾಯ್ಕರ ಕಾವ್ಯದ ಪ್ರಧಾನ ಆಶಯ ಮನುಷ್ಯತ್ವದ ಹುಡುಕಾಟ. ಅವರ ಬಹುತೇಕ ಕವಿತೆಗಳು ಸಮಾಜವಾದಿ ನೆಲೆಯ ಮೂಸೆಯಿಂದ ಹೊರಹೊಮ್ಮಿದವುಗಳಾಗಿವೆ” ಎಂದರು. 1960ರಲ್ಲಿ ಪ್ರಾರಂಭವಾದ ವಿಷ್ಣು ನಾಯ್ಕರ ಕಾವ್ಯದ ಪಯಣದ ಹಲವು ಮಜಲುಗಳ ಕುರಿತು ವಿವರಿಸಿದರು.
ವಿಷ್ಣು ನಾಯ್ಕ ಅವರನ್ನು ಅಭಿನಂದಿಸಿದ ಕವಿ ಶಾಂತಾರಾಮ ನಾಯಕ ಹಿಚಕಡ ಮಾತನಾಡಿ, ಕನ್ನಡ ಕಾವ್ಯದ ಸಕಲ ಅವಸ್ಥಾಂತರಗಳನ್ನು ಹಾಯ್ದು ಬಂದಿರುವ ಈ ಕವಿ ಯಾವುದಕ್ಕೂ ಅಂಟಿಕೊಳ್ಳದೇ ತಮ್ಮದೇ ಮಾರ್ಗದಲ್ಲಿ ಅನನ್ಯತೆಯನ್ನು ಸಾಧಸಿದ್ದಾರೆಂದರು. ಡಾ.ಎಂ.ಜಿ.ಹೆಗಡೆ, ವಿಭಿನ್ನ ದೃಷ್ಟಿಕೋನವುಳ್ಳ ಜನರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ವಿಷ್ಣು ನಾಯ್ಕರು ಎಲ್ಲರನ್ನು ಜೊತೆ ಜೊತೆಗೆ ಕರೆದೊಯ್ಯುವ ಔದಾರ್ಯ ಮೆರೆದಿದ್ದಾರೆ. ತಾವು ಬೆಳೆಯುವ ಜೊತೆಗೆ ಇತರರನ್ನು ಬೆಳೆಸಿದ್ದು ವಿಷ್ಣು ನಾಯ್ಕರ ಹೆಗ್ಗಳಿಕೆ ಎಂದರು.
ಪ್ರಾಚಾರ್ಯ ಸಿದ್ದಲಿಂಗಸ್ವಾಮಿ ವಸ್ತ್ರದ ವಿಷ್ಣು ನಾಯ್ಕರು ವಾಸಿಸುವ ಅಂಬಾರಕೊಡ್ಲ ರಸ್ತೆ ಸಾಹಿತ್ಯಾಸಕ್ತರ ಪಾಲಿಗೆ ಕವಿರಾಜ ಮಾರ್ಗವಾಗಿದ್ದು, ಅವರ ಮನೆ ಸಾಹಿತ್ಯದ ಮಹಾಮನೆಯಿದ್ದಂತೆ, ಅವರೊಡನೆ ಚರ್ಚೆ ಮಾಡಿದಂತೆ ಜಗಳವನ್ನು ಕೂಡ ಆಡಬಹುದು ಎಂದರು. ವಿಷ್ಣು ನಾಯ್ಕರ ಬದುಕಿನಲ್ಲಿ ಅರ್ಧಾಂಗಿ ಕವಿತಾ ವಹಿಸಿದ ಪಾತ್ರವನ್ನು ನೆನೆಪಿಸಿಕೊಂಡರು. ಸಭೆಯ ಅಧ್ಯಕ್ಷತೆ ವಹಿಸಿದ ಮೋಹನ ಹಬ್ಬು ಮಾತನಾಡಿ, “ವಿಷ್ಣು ನಾಯ್ಕ ಅವರ ಸಾಧನೆ ಅಚ್ಚರಿ ಹುಟ್ಟಿಸುವಂತಹದು. ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೈಯಾಡಿಸಿದರು. ಮುಖ್ಯವಾಗಿ ಅವರು ಓರ್ವ ಅಪ್ಪಟ ಕವಿಯೆಂದರು.
ಕಾರ್ಯಕ್ರಮ ಕ್ಷಮಾ ನಾಯ್ಕ ಅವರ ವಿಷ್ಣು ನಾಯ್ಕರ ವಿರಚಿತ ಹಾಡಿನ ಪ್ರಸ್ತುತಿಯೊಂದಿಗೆ ಪ್ರಾರಂಭವಾಯಿತು. ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಸ್ವಾಗತಿಸಿದರು. ಡಾ. ರಾಮಕೃಷ್ಣ ಗುಂದಿ ಪ್ರತಿಷ್ಠಾನ ಹಮ್ಮಿಕೊಂಡಿರುವ ಮನೆಯಂಗಳದ ಕಾರ್ಯಕ್ರಮದ ಆಶಯವನ್ನು ವಿವರಿಸಿದರು. ಕೊನೆಯಲ್ಲಿ ಜಗದೀಶ ನಾಯಕ ಹೊಸ್ಕೇರಿ ವಂದಿಸಿದರು. ಲೇಖಕ ಮಹಾಂತೇಶ ರೇವಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕವಿ ವಿಷ್ಣು ನಾಯ್ಕರು ಕೃತಜ್ಞತೆಯನ್ನು ಸಲ್ಲಿಸಿದರು.
ಅತ್ಯಂತ ಅರ್ಥಪೂರ್ಣವಾಗಿ ಜರುಗಿದ ವಿಷ್ಣು ನಾಯ್ಕರ ಸಮಗ್ರ ಕಾವ್ಯ ಭಾಗ-2 ರ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಕಾರವಾರ, ಕುಮಟಾ, ಅಂಕೋಲಾ, ಹೊನ್ನಾವರಗಳಿಂದ ಆಗಮಿಸಿದ ವಿಷ್ಣು ನಾಯ್ಕ ಅಭಿಮಾನಿಗಳು ಭಾಗವಹಿಸಿದ್ದರು.