ಕುಮಟಾ: ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ತನ್ನ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುವವನಿಗೆ ಪುರಸ್ಕಾರ, ಗೌರವಗಳು ಹುಡುಕಿ ಬರುತ್ತವೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ನಟ, ನಿರ್ಮಾಪಕ, ರಂಗಕರ್ಮಿ ಕಾಸರಗೋಡು ಚಿನ್ನಾ ಹೇಳಿದರು. ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ಆದರ್ಶ ಶಿಕ್ಷಕಿ ವಿನಯಾ ಶಾನಭಾಗ ಅವರ ನೆನಪಿನಲ್ಲಿ ಕೊಡಮಾಡುವ ‘ವಿನಯಸ್ಮೃತಿ ಆದರ್ಶ ಶಿಕ್ಷಕ ಪುರಸ್ಕಾರ ಪ್ರದಾನ ಸಮಾರಂಭ’ ಹಾಗೂ ‘ಕೊಂಕಣಿ ಮಾನ್ಯತಾ ದಿವಸ’ ಕಾರ್ಯಕ್ರಮವನ್ನು ಕಾಸರಗೋಡು ಚಿನ್ನಾ ಅವರು ಉದ್ಘಾಟಿಸಿ, ಗೋಕರ್ಣದ ಆಡುಕಟ್ಟಾದ ಹಿರಿಯ ಪ್ರಾಥಮಿಕ ಶಾಲೆ ನಂ.2ನ ಮುಖ್ಯ ಶಿಕ್ಷಕ ಪರಮೇಶ್ವರ ಎಂ. ಮುಕ್ರಿ ಅವರಿಗೆ ಸಮರ್ಥ ಶಿಕ್ಷಕ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.
ಪ್ರಶಸ್ತಿ ಪುರಸ್ಕೃತ ಪಿ.ಎಂ ಮುಕ್ರಿ ಮಾತನಾಡಿ, ನನ್ನ ಕಾರ್ಯವನ್ನು ಗುರುತಿಸಿ ಸಂಸ್ಥೆಯವರು ನೀಡುತ್ತಿರುವ ಈ ಪುರಸ್ಕಾರ ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿಗಳಿಗಿಂತಲೂ ಮಿಗಿಲಾಗಿದೆ. ನಾನು ನನ್ನ ಕಾರ್ಯವನ್ನು ಯಾವುದೇ ಅಪೇಕ್ಷೆ ಇಲ್ಲದೆ ಮಾಡಿದ್ದೇನೆ. ಸಂಸ್ಥೆಯವರು ನನಗೆ ಗೊತ್ತಿಲ್ಲದಂತೆ ನನ್ನನ್ನು ಆಯ್ಕೆ ಮಾಡಿ ಈ ಗೌರವ ನೀಡಿರುವುದು ಹೆಮ್ಮೆ ತಂದಿದೆ. ಕೊಂಕಣ ಎಜುಕೇಶನ ಟ್ರಸ್ಟ್ ಒಂದು ಮಾದರಿ ಸಂಸ್ಥೆಯಾಗಿದ್ದು, ಇಲ್ಲಿಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದರು. ಅಭಿವೃದ್ಧಿ ವಿಭಾಗದ ಉಪನಿರ್ದೇಶಕ ಎನ್.ಜಿ.ನಾಯ್ಕ, ಶೈಕ್ಷಣಿಕ ಸಲಹೆಗಾರ ಆರ್.ಎಚ್.ದೇಶಭಂಡಾರಿ, ಸAಸ್ಥೆಯ ಅಧ್ಯಕ್ಷ ವಿಠಲ್ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ, ಸಾವಿತ್ರಿ ಮುಕ್ರಿ, ಮುಖ್ಯೋಪಾಧ್ಯಾಯರಾದ ಸುಮಾ ಪ್ರಭು, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ ಇದ್ದರು. ವಿಶ್ವಸ್ಥ ಅನಂತ ಶಾನಭಾಗ ಸರ್ವರನ್ನೂ ಸ್ವಾಗತಿಸಿದರು. ರಮೇಶ ಪ್ರಭು ವಂದಿಸಿದರು. ಶಿಕ್ಷಕ ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಚಿದಾನಂದ ಭಂಡಾರಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು.