ಹೊನ್ನಾವರ: ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ತಾಲೂಕಿನ ಕಾಸರಕೋಡ ರಾಷ್ಟ್ರೀಯ ಹೆದ್ದಾರಿ-66ರಿಂದ ಹೊನ್ನಾವರ ಬಂದರು ಪ್ರದೇಶಕ್ಕೆ ಪ್ರಸ್ತಾಪಿತ ಚತುಷ್ಪಥ ರಸ್ತೆ ನಿರ್ಮಾಣ ಸ್ಥಳದ ಪರಿವೀಕ್ಷಣೆ ನಡೆಸಿದರು.
ಡಾ.ದೀಪಕ್ ಆಪ್ಟೆ ಮತ್ತು ಡಾ.ಎಚ್ ಖಾರ್ಕ್ವಾಲ್ ಟೊಂಕಾ ಕಡಲತೀರದ ಪ್ರದೇಶವನ್ನು ವೀಕ್ಷಿಸಿದರು. ಮೀನುಗಾರ ಮುಖಂಡ ರಾಜು ತಾಂಡೇಲ್ ಈ ಹಿಂದೆ ಪ್ರಕೃತಿ ವಿಕೋಪದಿಂದ ಮಲ್ಲುಕುರ್ವಾ ಗ್ರಾಮದಿಂದ ಮನೆ ಮಠಗಳನ್ನು ಕಳೆದುಕೊಂಡು, ಇಲ್ಲಿಗೆ ಬಂದು ಮೀನುಗಾರಿಕೆ ಮಾಡುತ್ತಿದ್ದು ನಮ್ಮ ಹತ್ತಿರ ದಾಖಲೆ ಸಹ ಇದೆ. ಸಾಂಪ್ರದಾಯಿಕವಾಗಿ ಮೀನುಗಾರಿಕೆ ಮಾಡುತ್ತಿದ್ದೇವೆ. ಬಂದರು ನಿರ್ಮಾಣ ಮಾಡಿದರೇ ನಮಗೆ ಮುಂದೆ ಮೀನುಗಾರಿಕೆ ಮಾಡಿಕೊಂಡು ಜೀವನ ನಡೆಸುವುದು ಕಷ್ಟವಾಗುವ ಸಾಧ್ಯತೆ ಇರುತ್ತದೆ. ಈ ಮೊದಲು ಇಲ್ಲಿ ಕಚ್ಚಾ ರಸ್ತೆ ಮಾತ್ರ ಇತ್ತು ಕಂಪನಿಯವರು ಕಲ್ಲು ಮಣ್ಣು ಹಾಕಿ ರಸ್ತೆ ಆಗಲ ಮಾಡಿರುತ್ತಾರೆ. ಕಂಪನಿಯ 2% ಕೆಲಸ ಮಾತ್ರ ಆಗಿರುವಾಗಲೇ ಧಮ್ಕಿ ಹಾಕುತ್ತಾರೆ. ಇಲ್ಲಿ ರಸ್ತೆ ನಿರ್ಮಾಣ ಮಾಡಲು ಅನುಮತಿ ನೀಡದಂತೆ ಒತ್ತಾಯಿಸಿದರು.
ರಾಜೇಶ್ ತಾಂಡೇಲ್ ಮಾತನಾಡಿ, ಕಂಪನಿ ಅಧಿಕಾರಿಗಳು ಈ ಹಿಂದೆ ಅನುಮತಿ ಪಡೆದು ರಸ್ತೆ ಕೆಲಸ ಮಾಡುತ್ತಿದ್ದೇವೆ ಎಂದಿದ್ದರು. ಈಗ ಯಾವುದೇ ಅನುಮತಿ ಪಡೆಯದೇ ರಸ್ತೆ ಕೆಲಸ ಪ್ರಾರಂಭ ಮಾಡಿರುದು ಗಮನಕ್ಕೆ ಬಂದಿದೆ. ಅಪರೂಪದ ಆಲಿವ್ ರೆಡ್ಲಿ ಕಡಲಾಮೆಗಳು ಇಲ್ಲಿ ಮೊಟ್ಟೆಯಿಡುತ್ತಿದ್ದು ಈ ಬಗ್ಗೆ ಹಲವು ದಾಖಲೆಗಳಿವೆ ಎಂದರು. ಇಲ್ಲಿ ಬಂದರು ನಿರ್ಮಾಣ ಮಾಡುವುದರಿಂದ ಬಡ ಮೀನುಗಾರರಿಗೆ ಸಮಸ್ಯೆ ಆಗಲಿದೆ ಎಂದರು.
ಸಮಿತಿಯ ಅಧ್ಯಕ್ಷರಾದ ಡಾ.ದೀಪಕ್ ಆಪ್ಟೆ ಮೀನುಗಾರರೊಂದಿಗೆ ಚರ್ಚೆ ಬಳಿಕ ಮಾತನಾಡಿ ಖಾಸಗಿ ಬಂದರು ನಿರ್ಮಾಣ ನ್ಯಾಯಲಾಯದ ಹಂತದಲ್ಲಿದೆ. ನಾವು ಇಲ್ಲಿ ರಸ್ತೆ ನಿರ್ಮಾಣ ಸ್ಥಳದ ಪರಿವೀಕ್ಷಣೆಯನ್ನು ಮಾಡಲು ಮಾತ್ರ ಬಂದಿದ್ದು, ಸಂಬ0ಧಿಸಿದ ಎಲ್ಲಾ ವಿಷಯಗಳನ್ನು ಪರಿಶೀಲನೆ ನಡೆಸಿ ವರದಿ ನೀಡಲಾಗುವುದು. ನಿಮ್ಮಲ್ಲಿರುವ ದಾಖಲೆಗಳಿದ್ದರೂ ಇ-ಮೇಲ್ ಮೂಲಕ ನಮಗೆ ಕಳುಹಿಸುವಂತೆ ಸೂಚಿಸಿದರು.
ಇಕೋ ಬೀಚ್ ಉಳಿಸಿ, ಬ್ಲೂ ಪ್ಲ್ಯಾಗ್ ಉಳಿಸಿ, ನಮ್ಮ ಸಮುದ್ರ ನಮ್ಮ ಹಕ್ಕು, ಸೇವ್ ಕಾಸರಕೋಡ್ ಬೀಚ್, ಸ್ಟಾಪ್ ಹೆಚ್ಪಿಪಿಎಲ್ ಪೋರ್ಟ್, ಬಡ ಮೀನುಗಾರರ ಬದುಕಿಗೆ ಕೊಳ್ಳಿ ಇಡಬೇಡಿ ಎನ್ನುವ ನಾಮಫಲಕ ಪ್ರದರ್ಶಿಸಿದರು. ರಸ್ತೆ ಪರಿವೀಕ್ಷಣೆಗೆ ಬರುವ ಬಗ್ಗೆ ಸ್ಥಳೀಯರಿಗಾಗಲಿ ನಮ್ಮ ವಕೀಲರಿಗಾಗಲಿ ಮಾಹಿತಿ ಇಲ್ಲ. ಗೊತ್ತಿದ್ದರೆ ಸಾವಿರಾರು ಮೀನುಗಾರರು ಸೇರುತ್ತಿದ್ದೇವು. ರಸ್ತೆ ನಿರ್ಮಾಣದಿಂದ ಕಡಲಾಮೆಗೆ, ಮೀನುಗಾರರಿಗೆ ತೊಂದರೆಯಾಗಲಿದೆ ಎನ್ನುವುದು ಮೀನುಗಾರರ ಆರೋಪವಾಗಿದೆ.
ಡಿಎಸ್ಪಿ ವಿಜಯಪ್ರಸಾದ, ತಹಶೀಲ್ದಾರ ರವಿರಾಜ ದೀಕ್ಷಿತ್, ಬಂದರು ಹಾಗೂ ಎನ್.ಎಚ್.ಎ.ಎಲ್ ಅಧಿಕಾರಿಗಳು, ಪ್ರವೇಟ್ ಪೋರ್ಟ್ ಕಂಪನಿಯ ಇಂಜಿನಿಯರ್ ತಾರ್ಕೇಶ್ ಪಾಯ್ದೆ ಮೀನುಗಾರರು ಇದ್ದರು.