ಸಿದ್ದಾಪುರ: ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಸಾಂಸ್ಕೃತಿಕ ಪ್ರಕ್ರಿಯೆ ಭಿನ್ನವಾಗಿದ್ದರೂ ಅವೆರಡು ತಲುಪುವದು ಒಂದೇ ಬಿಂದುವಿಗೆ. ನಮ್ಮ ಪರಂಪರೆ ಭಕ್ತಿ ಮುಂತಾದ ಮಾರ್ಗಗಳ ಮೂಲಕ ಈ ಪ್ರಕ್ರಿಯೆಯನ್ನು ನಡೆಸಿಕೊಂಡುಬಂದಿದೆ. ಸಾಂಸ್ಕೃತಿಕ ಚೈತನ್ಯವನ್ನು ಉಳಿಸಿಕೊಂಡು ಕಲಾಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಹೇಳಿದರು.
ಅವರು ಪಟ್ಟಣದ ಶಂಕರಮಠದ ಸಭಾಭವನದಲ್ಲಿ ರಂಗಸೌಗಂಧ ತಂಡ 2023-24ರ ರಂಗಸಂಚಾರಕ್ಕಾಗಿ ಸಿದ್ಧಗೊಳಿಸಿದ ಎನ್.ಎಸ್.ರಾವ್ ಮೂಲರಚನೆಯ,ಗಣಪತಿಹೆಗಡೆ ಹುಲಿಮನೆ ನಿರ್ದೇಶಿಸಿದ 36 ಅಲ್ಲ 63 ಎನ್ನುವ ಹವಿಗನ್ನಡ ನಾಟಕದ ಮೊದಲ ಪ್ರದರ್ಶನ ಉದ್ಘಾಟಿಸಿ ಮಾತನಾಡಿ ಸಾಂಸ್ಕೃತಿಕ ಪ್ರಜ್ಞೆ ಕ್ಷೀಣಗೊಳ್ಳುತ್ತಿರುವ ಸಂದರ್ಭ ಇದು. ಇತಿಹಾಸವನ್ನು ಮರೆತು, ಭವಿಷ್ಯ ಕಟ್ಟುವದನ್ನು ಮರೆತಿದ್ದೇವೆ. ಜೀವನ ಮಾರ್ಗವಾದ ಸಾಂಸ್ಕೃತಿಕ ಪ್ರಕ್ರಿಯೆಯನ್ನು ಮರೆಯುತ್ತಿದ್ದೇವೆ. ರಂಗಸೌಗಂಧದಂತ ರಂಗ ತಂಡಗಳು ಚೈತನ್ಯವನ್ನು ನಿರಂತರವಾಗಿರಿಸಿಕೊಂಡು ಕಲಾಪರಂಪರೆ ಮುಂದುವರಿಸುತ್ತಿವೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಪ್ರಾಚಾರ್ಯ ಪ್ರೊ|ಎಂ.ಕೆ.ನಾಯ್ಕ ಹೊಸಳ್ಳಿ ಮಾತನಾಡಿ ನಮ್ಮ ಮೂಲ ಅಸ್ಮಿತೆಯನ್ನು ಕಾಯ್ದುಕೊಳ್ಳುವಂಥ ಇಂಥ ಪ್ರಯತ್ನಗಳು ಶಾಘ್ಲನೀಯವಾದದ್ದು. ಭಾಷೆ ಸ್ಥಾನಿಕವಾಗಿದ್ದರೂ ಅದನ್ನು ಅರ್ಥ ಮಾಡಿಕೊಳ್ಳುವದು ಮುಖ್ಯ. ನಮ್ಮ ಭಾಷೆಗೆ ಒಂದು ತೀವ್ರತೆ ಇದೆ. ಅದರ ಸಾರವನ್ನು ಪಡೆದುಕೊಳ್ಳುವದು ಮುಖ್ಯ. ಹವಿಗನ್ನಡದ ಈ ನಾಟಕ ಯಶಸ್ವಿಯಾಗಲಿ ಎಂದರು.
ಇನ್ನೊರ್ವ ಮುಖ್ಯ ಅತಿಥಿ ಸಾಹಿತಿ,ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ ಎಲ್ಲವೂ ವಿಘಟಿತಗೊಳ್ಳುತ್ತಿರುವ ಸಂದರ್ಭ ಇದು. ಮನಸ್ಸು,ಸಮಾಜ,ಭಾಷೆ ಮುಂತಾಗಿ ಒಡೆದುಹೋಗುವದನ್ನು ಕೂಡಿಸುವದು ಸಾಹಿತ್ಯ,ರಂಗಭೂಮಿ ಮುಂತಾದವು. ಈ ಹಿಂದೆ ಪೌರಾಣಿಕ,ಸಾಮಾಜಿಕ,ಐತಿಹಾಸಿಕ ನಾಟಕಗಳನ್ನು ಪ್ರದರ್ಶಿಸಿದ ರಂಗಸೌಗಂಧ ತಂಡ ಹೊಸ ಸವಾಲನ್ನು ಸ್ವೀಕರಿಸಿ ಈ ನಾಟಕ ಸಿದ್ಧಪಡಿಸಿದ್ದು ಇದು ಎಲ್ಲವನ್ನೂ ಒಗ್ಗೂಡಿಸುವಲ್ಲಿ ಯಶಸ್ಸು ಪಡೆಯಲಿ ಎಂದರು.
ರಂಗಸೌಗಂಧ ತಂಡದ ಮುಖ್ಯಸ್ಥ ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು. ರಾಜೇಂದ್ರ ಕೊಳಗಿ ಪ್ರಾರ್ಥಿಸಿದರು. ರಾಜಾರಾಮ ಭಟ್ಟ ಹೆಗ್ಗಾರಳ್ಳಿ ವಂದಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರು.