ಶಿರಸಿ : ನಾಡಿನ ಪವಿತ್ರ ತೀರ್ಥಕ್ಷೇತ್ರವಾಗಿರುವ ಮಂಜಗುಣಿ, ಪ್ರವಾಸಿಗಳ ಸಂಖ್ಯೆಯಲ್ಲಿ ದಿನೇದಿನೇ ಹೆಚ್ಚಳ ಕಾಣುತ್ತಿದ್ದರೂ, ಮೂಲಭೂತ ಸೌಕರ್ಯ ಕೊರತೆಯಿಂದಾಗಿ ನಿರೀಕ್ಷಿತ ಅಭಿವೃದ್ಧಿಯನ್ನು ಹೊಂದುತ್ತಿಲ್ಲ.
ಶಿರಸಿಯಿಂದ 20 ಕಿಮೀ ದೂರದಲ್ಲಿರುವ ಮಂಜಗುಣಿ, ಶಿರಸಿ ಕುಮಟಾ ರಾಜ್ಯ ಹೆದ್ದಾರಿಯಿಂದ ಕೇವಲ 5 ಕಿ.ಮೀ. ಅಂತರದಲ್ಲಿದ್ದು, ಸುಸಜ್ಜಿತ ರಸ್ತೆ ಸಂಪರ್ಕ ಹೊಂದಿದೆ. ಆದರೆ ಸರಿಯಾದ ಸಾರಿಗೆ ಸಂಸ್ಥೆಯ ಬಸ್‌ಗಳ ವ್ಯವಸ್ಥೆಯಿಂದ ವಂಚಿತವಾಗಿರುವುದರಿಂದ ಪ್ರವಾಸಿಗಳಷ್ಟೇ ಅಲ್ಲದೇ ಸ್ಥಳೀಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಿದೆ.
ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿಧ್ಯಾರ್ಥಿಗಳು ಇದೊಂದೇ ಮಾರ್ಗದ ಸಾರಿಗೆಯನ್ನು ಅವಲಂಬಿಸಿದ್ದು, ತಮ್ಮ ಮನೆಗಳಿಂದ ಎರಡು ಮೂರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗಬೇಕಿರುವುದು ಶೈಕ್ಷಣಿಕ ಪ್ರಗತಿಗೆ ಸಮಸ್ಯೆಯಾಗಿದೆ. ಶಾಲಾ ಸಮಯಕ್ಕೆ ಇಲ್ಲದ ಸಾರಿಗೆಯಿಂದಾಗಿ ಊಟ ತಿಂಡಿಯನ್ನೂ ಬಿಟ್ಟು ತರಗತಿಗಳಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಘಟ್ಟ ಪ್ರದೇಶದ ದಟ್ಟ ಕಾನನ ಮತ್ತು ಹೆಚ್ಚು ಮಳೆಯಾಗುವ ಭೌಗೋಳಿಕ ಹಿನ್ನೆಲೆಯಿಂದ ವಿರಳ ಜನಸಾಂದ್ರತೆಯನ್ನು ಹೊಂದಿರುವ ಪ್ರದೇಶದಲ್ಲಿ ಸಮಯಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೇ ಸಂಚಾರ ಸಮಸ್ಯೆಯಿಂದಾಗಿ,
ರಾಜ್ಯಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯೂ ಇಲ್ಲಿ ನಿರೀಕ್ಷಿತ ಪ್ರಯೋಜನ ಒದಗಿಸುತ್ತಿಲ್ಲ.
ಸ್ಥಳೀಯ ಗ್ರಾಮ ಪಂಚಾಯತ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಕಲ್ಲಳ್ಳಿ ಮತ್ತು ಯುವ ಸಹಕಾರ ಧುರೀಣ ಪ್ರವೀಣ ಗೌಡ ಪಾಟೀಲ್ ತೆಪ್ಪಾರ, ಅಭಿವೃದ್ಧಿಯ ಅಸಮತೋಲನ ನಿವಾರಣೆಗಾಗಿ ಕೆಲವರ್ಷಗಳ ಹಿಂದೆ ಸರ್ಕಾರ ರಚಿಸಿದ್ದ ಪಂಚಾಯತ ಮರುವಿಂಗಡನಾ ಸಮೀತಿಯ ಶಿಫಾರಸ್ಸಿನನ್ವಯ ಪ್ರತ್ಯೇಕ ಗ್ರಾಮ ಪಂಚಾಯತ ರಚಿತವಾಗಿದ್ದರೂ ನಿರೀಕ್ಷಿತ ಪ್ರಗತಿಗೆ ಅನುದಾನದ ಕೊರತೆ ಮತ್ತು ಭೌಗೋಳಿಕ ಹಿನ್ನೆಲೆಯು ಸಮಸ್ಯೆ ತಂದಿಟ್ಟಿದೆ. ಸಾರಿಗೆ ಸಮಸ್ಯೆ ನಿವಾರಣೆಗಾಗಿ ಸತತವಾಗಿ ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನ ಕಾಣದಿರುವುದು ಬಹುದೊಡ್ಡ ಕೊರಗಾಗಿದ್ದು, ನೂತನ ಸರ್ಕಾರ ಮತ್ತು ಶಾಸಕರ ಸಹಕಾರದ ಭರವಸೆಯನ್ನು ನಿರೀಕ್ಷಿಸಿ ಪ್ರಯತ್ನವನ್ನು ಮುಂದುವರೆಸಲಾಗುತ್ತಿದೆ ಎಂದಿದ್ದಾರೆ.
ಮಂಜುಗುಣಿ ಕೇಂದ್ರಿತವಾಗಿ, ಕಲ್ಲಳ್ಳಿ, ಕಳೂಗಾರ, ತೆಪ್ಪಾರ, ಖೂರ್ಸೆ, ತೋಟದಳ್ಳಿ, ನೆಕ್ಕರಕಿ ಊರುಗಳಿಗೆ ಇರುವ ಏಕೈಕ ಸಾರಿಗೆ ಮಾರ್ಗವಾದ, ಶಿರಸಿ ಸಂಪಖಂಡ ಮಂಜಗುಣಿ ಮಾರ್ಗದಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆಯಾಗದೇ ಸ್ಥಳೀಯ ಪ್ರದೇಶಾಭಿವೃದ್ದಿಯಾಗದು, ಎನ್ನುವುದು ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.