ದಾಂಡೇಲಿ: ನಗರದ ಸಾರ್ವಜನಿಕ ಆಸ್ಪತ್ರೆಗೆ ಅತೀ ಅಗತ್ಯವಾಗಿ ಬೇಕಾಗಿದ್ದ ನೂತನ ಡಯಾಲಿಸಿಸ್ ಯಂತ್ರವನ್ನು ಶಾಸಕರಾದ ಆರ್.ವಿ. ದೇಶಪಾಂಡೆ ಲೋಕಾರ್ಪಣೆಗೊಳಿಸಿದರು.
ಹಳಿಯಾಳದ ವಿ.ಆರ್.ಡಿ.ಎಂ ಟ್ರಸ್ಟ್ ವತಿಯಿಂದ ಸರಿ ಸುಮಾರು ರೂ :8 ಲಕ್ಷ ಮೊತ್ತದ ಈ ಡಯಾಲಿಸಿಸ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಗಿದೆ. ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಹಾಗೂ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಮಾತನಾಡಿ, ನಮ್ಮ ಮನವಿಗೆ ತಡವರಿಯದೇ ಸ್ಪಂದಿಸುವ ಮೂಲಕ ಅನೇಕ ರೋಗಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಆರ್.ವಿ.ದೇಶಪಾಂಡೆಯವರು ತಮ್ಮ ಟ್ರಸ್ಟ್ ಮೂಲಕ ಡಯಾಲಿಸಿಸ್ ಯಂತ್ರವನ್ನು ಕೊಡುಗೆಯಾಗಿ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಆಸ್ಪತ್ರೆಗೆ ಔಷಧಿ ತರಲು ಹಾಗೂ ಆರೋಗ್ಯ ಶಿಬಿರವನ್ನು ಸಂಘಟಿಸಲು ಜೀಪು ವಾಹನದ ಅವಶ್ಯಕತೆಯಿದೆ. ಈಗಾಗಲೆ ಇದ್ದಿರುವ ಜೀಪನ್ನು ವಿಲೇವಾರಿ ಮಾಡಲಾಗಿರುವುದರಿಂದ ಇದೀಗ ತುರ್ತು ಸಂದರ್ಭದಲ್ಲಿ ತೀವ್ರ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಜೀಪನ್ನು ಒದಗಿಸಿಕೊಡಬೇಕು ಮತ್ತು ಸಾರ್ವಜನಿಕ ಆಸ್ಪತ್ರೆಗೆ ಇನ್ನೊಂದು ಆಂಬುಲೆನ್ಸ್ ನೀಡಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಹಾಗೂ ತಾಲ್ಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಮತ್ತು ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆಯವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸದಾ ಸದೃಢವಾಗಿರಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಆಸ್ಪತ್ರೆಗಳ ಸಮಸ್ಯೆಗಳಿಗೆ ಆಧ್ಯತೆಯಡಿ ಸ್ಪಂದಿಸಲಾಗುತ್ತಿದೆ. ಸಾರ್ವಜನಿಕ ಆಸ್ಪತ್ರೆಗೆ ಅತೀ ಜರೂರಾಗಿ ಜೀಪನ್ನು ಒದಗಿಸಿಕೊಡಬೇಕು ಮತ್ತು ಆಂಬುಲೆನ್ಸ್ ವಾಹನವನ್ನು ಒದಗಿಸಲು ಸಹ ಕ್ರಮವನ್ನು ಕೈಗೊಳ್ಳುವಂತೆ ಜಿಲ್ಲಾ ವೈದ್ಯಾಧಿಕಾರಿಯವರಿಗೆ ಸ್ಥಳದಲ್ಲೆ ಸೂಚಿಸಿದರು. ಸಾರ್ವಜನಿಕ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದರ ಬಗ್ಗೆ ಹಾಗೂ ಬ್ಲಡ್ ಬ್ಯಾಂಕ್ ಬಗ್ಗೆ ಕಳುಹಿಸಲಾದ ಪ್ರಸ್ತಾವನೆಯ ಸ್ಥಿತಿಗತಿಗಳ ಬಗ್ಗೆ ಕೂಡಲೆ ವರದಿ ನೀಡುವಂತೆ ಸೂಚಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅತ್ಯುತ್ತಮವಾಗಿ ಕರ‍್ಯನಿರ್ವಹಿಸುತ್ತಿರುವುದನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ.ನೀರಜ್, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ನಾಯ್ಕರ್, ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ಎಸ್.ಟಿ.ಬಂಟ್, ಡಾ.ಅರುಣ್ ಕುಮಾರ್, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಆರ್.ಹೆಗಡೆ ಉಪಸ್ಥಿತರಿದ್ದರು. ಸಾರ್ವಜನಿಕ ಆಸ್ಪತ್ರೆಯ ನೀಲಾ ಅವರು ಸ್ವಾಗತಿಸಿದ ಕಾರ‍್ಯಕ್ರಮಕ್ಕೆ ತುಳಸಾ ವಂದಿಸಿದರು.