• Slide
    Slide
    Slide
    previous arrow
    next arrow
  • ಉತ್ತಮ ದೇಶ ನಿರ್ಮಾಣಕ್ಕೆ ಶಿಕ್ಷಣ ಅತ್ಯಗತ್ಯ: ಶಾಸಕ ಭೀಮಣ್ಣ ನಾಯ್ಕ್

    300x250 AD

    ಶಿರಸಿ: 77ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ನಗರದ ಮಾರಿಕಾಂಬಾ ಕ್ರೀಡಾಂಗಣದಲ್ಲಿ ವೈಭವಯುತ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

    ಸಹಾಯಕ ಆಯುಕ್ತ ದೇವರಾಜ ಆರ್. ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯವು ಸುಲಭವಾಗಿ ದಕ್ಕಿದ್ದಲ್ಲ. ಹಲವಾರು ಜನರ ತ್ಯಾಗ, ಬಲಿದಾನಗಳಿಂದ ಸಿಕ್ಕಿದ್ದಾಗಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿ ಭಾರತೀಯನ ಹೆಗಲ ಮೇಲಿದೆ ಎಂದರು. ನಮ್ಮ ರಾಷ್ಟ್ರ ನಾಯಕರು ತೋರಿಸಿಕೊಟ್ಟ ಭಾವೈಕ್ಯತೆ, ಜಾತ್ಯಾತೀತತೆ, ರಾಷ್ಟ್ರೀಯತೆ,ಭ್ರಾತೃತ್ವತೆಯನ್ನು ಮೈಗೂಡಿಸಿಕೊಂಡು, ವೈಯಕ್ತಿಕ ಜೀವನದ ಜೊತೆ ದೇಶದ ಅಭಿವೃದ್ಧಿಗೆ ಶ್ರಮಿಸಿ, ಭಾರತವನ್ನು ಭವ್ಯ ರಾಷ್ಟ್ರವನ್ನಾಗಿಸಲು ಪಣ ತೊಡಬೇಕೆಂದು ಕರೆ ಕೊಟ್ಟರು. ತಂದೆ ತಾಯಂದಿರಿಗೆ, ಗುರು ಹಿರಿಯರಿಗೆ ಗೌರವ ನೀಡಿ, ಅವರ ಆದರ್ಶ, ಬುದ್ಧಿಮಾತನ್ನು ಅಳವಡಿಸಿಕೊಂಡರೆ ನಿಮ್ಮ ಯಶಸ್ಸು ಸಾಧ್ಯ. ನಿಮ್ಮ ಜೀವನದ ಅಭಿವೃದ್ಧಿ ಜೊತೆ ಸಾಮಾಜಿಕ ಬದ್ಧತೆ ಮೆರೆದು ದೇಶದ ಅಭಿವೃದ್ಧಿಗೆ ಕೈಜೋಡಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನಾಡಿದರು.

    ಬಡತನ, ಅಸಮಾನತೆ, ನಿರುದ್ಯೋಗಹಳಂತಹ ಪಿಡುಗುಗಳನ್ನು ಹೊಡೆದೊಡಿಸಿ ಸರ್ವ ಜನಾಂಗದ ಶಾಂತಿಯ ತೋಟ ಎಂಬ ರೀತಿ ದೇಶವನ್ನು ಬೆಳೆಸಬೇಕಾಗಿದೆ. ಕೇಂದ್ರ ಸರ್ಕಾರ ನನ್ನ ದೇಶ,ನನ್ನ ಮಣ್ಣು ಎಂಬ ಕಾರ್ಯಕ್ರಮ ಜಾರಿಗೊಳಿಸಿದ್ದು, ಅದರಿಂದ ವಸುಧೈವ ಕುಟುಂಬಕಂ ಎಂಬ ಪರಿಕಲ್ಪನೆಯನ್ನು ಮೂಡಿಸಲು ಯೋಜನೆ ರೂಪಿಸಿದೆ. ಇದೆಲ್ಲದರ ಜೊತೆ ‘ನನ್ನ ದೇಶ ಎಲ್ಲಕ್ಕಿಂತ ಮೊದಲು’ ಧ್ಯೇಯದೊಂದಿಗೆ ಮುನ್ನುಗ್ಗಿ, ಸಿಕ್ಕ ಸ್ವಾತಂತ್ರ್ಯವನ್ನು ಮಾಣಿಕ್ಯದ ರೀತಿ ಕಾಪಾಡಿಕೊಂಡು, ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಮ್ಮ ಯೋಚನೆ, ಯೋಜನೆ, ಮಾತು, ಕೃತಿ ಎಲ್ಲವನ್ನೂ ದೇಶದ ಒಳಿತಿಗಾಗಿ ಮೀಸಲಿಡಬೇಕೆಂದು ಹೇಳಿದರು.

    300x250 AD

    ನಂತರದಲ್ಲಿ ಶಾಸಕ ಭೀಮಣ್ಣ ನಾಯ್ಕ್ ಮಾತನಾಡಿ,ಸ್ವಾತಂತ್ರ್ಯದ ಶುಭಾಶಯಗಳನ್ನು ತಿಳಿಸುತ್ತಾ ಸಿಕ್ಕ ಸ್ವಾತಂತ್ರ್ಯವನ್ನು ಸ್ವೆಚ್ಛಾಚಾರಗೊಳಿಸದೇ, ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡೋಣ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅದರ ಪೂರ್ಣ ಪ್ರಯೋಜನಗಳನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು. ದೇಶ ಬಲಿಷ್ಠವಾಗಲು, ಅಭಿವೃದ್ಧಿಗೊಳ್ಳಲು ಶಿಕ್ಷಣ ಅತ್ಯಗತ್ಯ. ಶಿಕ್ಷಣಕ್ಕಾಗಿ ಹೆಚ್ಚಿನ ಮಹತ್ವ ಕೊಡುವುದರೊಂದಿಗೆ ಸುಶಿಕ್ಷಿತ ಸಮಾಜವನ್ನು ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು. ನಮ್ಮ ಉತ್ತರಕನ್ನಡ ಜಿಲ್ಲೆ ಹಿಂದಿನಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ‌ಮುಂಚೂಣಿಯಲ್ಲಿದ್ದು, ಅದಕ್ಕೆ ಸಾಕ್ಷಿಯೆಂಬಂತೆ ಶಿರಸಿಯ ಗಣೇಶನಗರ ಪ್ರೌಢಶಾಲಾ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ಜಪಾನಿನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ವಿಜ್ಞಾನ ಮೇಳಕ್ಕೆ ಶಿರಸಿಯ ಮಕ್ಕಳು ಆಯ್ಕೆಯಾಗಿದ್ದು ಹೆಮ್ಮೆಯ ವಿಷಯ. ಕಷ್ಟದ ಸಮಯದಲ್ಲೂ ಛಲದಿಂದ ಓದಿದರೆ ಯಶಸ್ಸನ್ನು ಕಾಣಬಹುದು ಎಂಬುದಕ್ಕೆ ಆ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ. ಜಪಾನಿನಲ್ಲಿ ನಡೆಯುವ ವಿಜ್ಞಾನ ಮೇಳದಲ್ಲೂ ಅವರು ಜಯಗಳಿಸಿ ನಮ್ಮ ರಾಷ್ಟ್ರದ ಹಿರಿಮೆಯನ್ನು ಅವರು ಹೆಚ್ಚಿಸಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪಂಚಪ್ರಾಣ ಪ್ರತಿಜ್ಞೆ ಸ್ವೀಕಾರ ನಡೆಯಿತು.

    ಕಾರ್ಯಕ್ರಮದಲ್ಲಿ ಪೋಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ, ಗೃಹರಕ್ಷಣಾ ಸಿಬ್ಬಂದಿ ಹಾಗೂ ನಗರದ ಶಾಸಕರ ಮಾದರಿ ಶಾಲಾ ಮಕ್ಕಳಿಂದ ಪಥ ಸಂಚಲನ ನಡೆಯಿತು. ತೇಲಂಗಾ ಪ್ರೌಢಶಾಲಾ ಮಕ್ಕಳಿಂದ ನಡೆದ ಏರೋಬಿಕ್ ಡಾನ್ಸ್ ಪ್ರದರ್ಶನವು ಎಲ್ಲರ ಮೆಚ್ಚುಗೆ ಗಳಿಸಿತು.

    Share This
    300x250 AD
    300x250 AD
    300x250 AD
    Leaderboard Ad
    Back to top