ಕುಮಟಾ : ಮ್ಹಾತೋಬಾರ ಶ್ರೀ ಧಾರಾನಾಥ ದೇವ, ಶ್ರೀ ಕ್ಷೇತ್ರ ಧಾರೇಶ್ವರ ಇವರ ಆಶ್ರಯದಲ್ಲಿ ಶ್ರೀ ಹರಿಹರೇಶ್ವರ ವೇದ ವಿದ್ಯಾಪೀಠ ಗೋಕರ್ಣದ
ಆಗಮ ವಿದ್ವಾನ್ ವೇ. ಗಣಪತಿ ಶಿವರಾಮ್ ಹಿರೆ ಭಟ್ ಮಾರ್ಗದರ್ಶನದಂತೆ ಶ್ರೀ ಹರಿಹರೇಶ್ವರ ವೇದ ವಿದ್ಯಾ ಪೀಠದ ವತಿಯಿಂದ ಲೋಕಕಲ್ಯಾಣಾರ್ಥಕ್ಕಾಗಿ ಆಚರಿಸಿದ ಶಾಕಲ ಋಕ್ ಸಂಹಿತಾ ಮಹಾಯಾಗ, ಚತುರ್ವೇದ ಪಾರಾಯಣ, ಋಗ್ವೇದ ದಶಗ್ರಂಥ ಪಾರಾಯಣ, ಪದ ಪಾರಾಯಣ ಪೂರ್ವಕ ಲಕ್ಷ ಬಿಲ್ವಾರ್ಚನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸತತ 8 ದಿನಗಳ ಕಾಲ ನಡೆದು ಶನಿವಾರದಂದು ಪೂರ್ಣಾಹುತಿಯ ಮೂಲಕ ಸುಸಂಪನ್ನಗೊಂಡಿತು.
ರಾಷ್ಟ್ರ, ರಾಜ್ಯ ಹಾಗೂ ಸಮಸ್ತ ಜನರಿಗೆ ಒಳಿತಾಗಲಿ ಎಂಬ ಸದುದ್ದೇಶದಿಂದ ಧಾರೇಶ್ವರದ ದೇವರ ಸನ್ನಿಧಿಯಲ್ಲಿ ಅಗಸ್ಟ 5 ಶನಿವಾರದಂದು ಕಾರ್ಯಕ್ರಮದ ಮುಖ್ಯ ಕಾರಣೀಭೂತರಾದ ವೇದ ಬ್ರಹ್ಮ ಉದಯ ಮಯ್ಯರ ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಮಹಾಸಂಕಲ್ಪ, ಗಣೇಶ ಪೂಜಾ, ದೇವತಾ ಪ್ರಾರ್ಥನೆ, ಪುಣ್ಯಾಹ, ನಾಂದಿ ಋತ್ವಿಗ್ ವರ್ಣನೆ, ಋಗ್ವೇದ ಸಂಹಿತಾ ಹವನ ಪ್ರಾರಂಭ, ಚರ್ತುದ್ರವ್ಯಾತ್ಮಕ ಅಥರ್ವಶೀರ್ಷ ಹವನ, ಚತುರ್ವೇದ ಪಾರಾಯಣ, ದಶಗ್ರಂಥ ಪಾರಾಯಣ, ಋಗ್ವೇದ ಪದ ಪಾರಾಯಣ ಪ್ರಾರಂಭ, ಮಧ್ಯಾಹ್ನ ಲಘು ಪೂರ್ಣಾಹುತಿ, ಮಹಾಪೂಜಾ, ಶಾಂತಿ ಪಾಠ, ಸಾಯಂಪೂಜಾ ನಡೆದವು.
ಆಗಸ್ಟ 6 ಭಾನುವಾರದಂದು ಋಗ್ವೇದ ಸಂಹಿತಾ ಯಾಗ, ಚತುರ್ವೇದ ಪಾರಾಯಣ, ದಶಗ್ರಂಥ ಪಾರಾಯಣ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಆಗಸ್ಟ 7 ಸೋಮವಾರದಂದು ವಿಶೇಷವಾಗಿ ರುದ್ರ ಹವನ ಸಂಪನ್ನಗೊಂಡಿತು. ಆಗಸ್ಟ 8 ರಿಂದ 11 ರ ತನಕ ಋಗ್ವೇದ ಸಂಹಿತಾ ಯಾಗ, ಚತುರ್ವೇದ ಪಾರಾಯಣ, ದಶಗ್ರಂಥ ಪಾರಾಯಣ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಆಗಸ್ಟ 10 ರ ಗುರುವಾರದಂದು ಸಂಜೆ ರಾಜೋಪಚಾರ ಪೂಜೆಗಳನ್ನು ಮಾಡಲಾಯಿತು.
ಆ. 11 ರ ಶುಕ್ರವಾರದಂದು ದುರ್ಗಾ ಹವನವನ್ನು ಧಾರೇಶ್ವರ ದೇವಾಲಯ ಅರ್ಚಕರ ಮೂಲಕ ನಡೆಸಲಾಯಿತು. ಈ ಪ್ರಯುಕ್ತ ಬೆಳಿಗ್ಗೆ
ಗೋಕರ್ಣದ ಮೈತ್ರಿ ಮಂಡಳ ಹಾಗೂ ಧಾರೇಶ್ವರ ಮೈತ್ರಿ ಮಂಡಳ ವತಿಯಿಂದ ಸೌಂದರ್ಯ ಲಹರಿ, ಲಲಿತಾ ಸಹಸ್ರನಾಮ ಹಾಗೂ ದೇವಿ ಸ್ತೋತ್ರ ಪಠಣ ಜಪಿಸಲಾಯಿತು.
ಹೀಗೆ ಅಂತಿಮ ದಿನವಾದ ಆಗಸ್ಟ 12 ರ ಶನಿವಾರದಂದು ಋಗ್ವೇದ ಸಂಹಿತಾ ಯಾಗ, ಚತುರ್ವೇದ ಪಾರಾಯಣ, ದಶಗ್ರಂಥ ಪಾರಾಯಣ, ಋಗ್ವೇದ ಪದ ಪಾರಾಯಣ ಮುಕ್ತಾಯದ ಜೊತೆಗೆ ಮಧ್ಯಾಹ್ನ 11.30 ರ ಮಹಾ ಪೂರ್ಣಾಹುತಿ ಜರುಗಿದವು. 12.30 ಕ್ಕೆ ಶ್ರೀ ಧಾರಾನಾಥ ದೇವರಲ್ಲಿ ಲಕ್ಷ ಬಿಲ್ವಾರ್ಚನೆ ಪೂರ್ವಕ ಮಹಾ ಪೂಜೆ ನಡೆಯಿತು. ಮಧ್ಯಾಹ್ನ 1.30 ಕ್ಕೆ ಪ್ರಸಾದ ವಿತರಣೆ ಮಹಾ ಅನ್ನ ಸಂತರ್ಪಣೆಯು ನಡೆಯಿತು.
ಇದಲ್ಲದೇ ಅಧ್ಯಾಯ ಕಂಠಸ್ತ ಹೇಳಿದ ವಿದ್ಯಾರ್ಥಿಗಳಿಗೂ ಸನ್ಮಾನಿಸಲಾಯಿತು.
ಈ ಯಾಗಕ್ಕೆ ಆಚಾರ್ಯತ್ವವನ್ನು ವಹಿಸಿದ ವೇದ ಬ್ರಹ್ಮ ಕೃಷ್ಣ ಭಟ್ಟ ಹಾಗೂ ಬ್ರಹ್ಮತ್ವ ವಹಿಸಿದ ವೇ. ವಿಶ್ವನಾಥ ರಮಣೀ ಹಾಗೂ ಸದಸ್ಯತ್ವವನ್ನು ವೇ. ಗಂಗಾರಾಮ ಜೋಗಳೇಕರ ವಹಿಸಿದ್ದರು.
ಕಾರ್ಯಕ್ರಮಕ್ಕೆ ಪೂರ್ಣರೂಪವಾಗಿ ಸಾರ್ವಭೌಮ ವೇದ ವಿದ್ಯಾಪೀಠದ ಪ್ರಾಚಾರ್ಯ ವೇ. ಗಣೇಶ ಜೋಶಿ ಅವರು ವಹಿಸಿದ್ದರು. 8 ದಿನಗಳ ಕಾರ್ಯಕ್ರಮಕ್ಕೆ ವಿಶೇಷವಾಗಿ ಗೋಕರ್ಣದ ಮೂರು ತಂತ್ರಿಗಳ ನೇತೃತ್ವದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನ ಗೊಂಡವು.
ಕಾರ್ಯಕ್ರಮದಲ್ಲಿ ಧಾರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದ ಮೂರ್ತಿ ಪಂಚಾಕ್ಷರಿ ಶಂಕರ ಅಡಿ, ವೇದಮೂರ್ತಿ ವಿಶ್ವೇಶ್ವರ ಉಪಾಧ್ಯಾಯ, ವೇದಮೂರ್ತಿ ಮಂಜುನಾಥ ನಾರಾಯಣ ಅಡಿ ಸೇರಿದಂತೆ ವಿಶೇಷವಾಗಿ ಗೋಕರ್ಣದ ಮೂರು ತಂತ್ರಿಗಳ ನೇತೃತ್ವದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.