ಅಂಕೋಲಾ: ಕಗ್ಗ ಭತ್ತ ಎಂದರೆ ಭತ್ತದ ತಳಿಗಳಲ್ಲೇ ವಿಶೇಷವಾದದ್ದು. ಬರಗಾಲದಂತಹ ಸಮಯದಲ್ಲಿಯೂ ಬಡವರ ಹೊಟ್ಟೆ ತಣಿಸುವ ಕಗ್ಗ ಭತ್ತ ಇಂದು ಅಳಿವಿನ ಅಂಚಿನಲ್ಲಿದೆ ಎಂದು ಪರಿಸರ ವಿಜ್ಞಾನಿ ಡಾ. ಸುಭಾಸಚಂದ್ರನ್ ಬೇಸರ ವ್ಯಕ್ತಪಡಿಸಿದರು.
ಅವರು ಕೇಣಿಯ ಸರಕಾರಿ ಪ್ರೌಢಶಾಲೆ ಹಾಗೂ ಜಗದೀಶಚಂದ್ರ ಭೋಸ್ ಇಕೋ ಕ್ಲಬ್ ಸಹಯೋಗದಲ್ಲಿ ಕೃಷ್ಣ ವಿಠೋಬ ನಾಯ್ಕ ಜಮೀನಿನಲ್ಲಿ ಆಯೋಜಿಸಲಾಗಿದ್ದ ಕಗ್ಗೋತ್ಸವ ಮತ್ತು ಕೃಷಿ ಹಬ್ಬ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಈ ಹಿಂದೆ ಕರಾವಳಿ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಕಗ್ಗ ಇಂದು ಕಣ್ಮರೆಯಾಗುತ್ತಿದೆ. ಕಗ್ಗ ಬೆಳೆಯುವ ಪ್ರದೇಶ ಇಂದು ಸಿಗಡಿ ಕೃಷಿಗಳ ಹೊಂಡವಾಗಿ ಪರಿವರ್ತನೆಗೊಳ್ಳುತ್ತಿದೆ. ಗಜನಿಯಂತಹ ಉಪ್ಪುನೀರಿನ ಪ್ರದೇಶದಲ್ಲಿ ಹಾಗೂ ಉಪ್ಪಿನ ಅಂಶವಿರುವ ಗದ್ದೆಗಳಲ್ಲಿ ಈ ಭತ್ತವನ್ನು ಬೆಳೆಯಲಾಗುತ್ತಿತ್ತು. ಕಗ್ಗ ಭತ್ತದ ಕೃಷಿಯಿಂದ ಭೂಮಿಯಲ್ಲಿ ಇಂಗಾಲದ ಶೇಖರಣೆಯೂ ಮಾಡಿಕೊಳ್ಳುತ್ತಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ ಮತ್ತು ಆರೋಗ್ಯಕ್ಕೂ ತುಂಬಾ ಒಳ್ಳೆಯದಾಗಿದ್ದು, ರೈತರು ಕಗ್ಗ ಭತ್ತದ ಕೃಷಿಯನ್ನು ಮುಂದುವರೆಸಿ ಕಗ್ಗದ ಉಳಿವಿಗೆ ಹೋರಾಡಿ ಎಂದು ಕರೆ ನೀಡಿದರು.
ಸಿಟಿಇ ಬೆಳಗಾವಿಯ ನಿವೃತ್ತ ಪ್ರವಾಚಕ ನಾಗರಾಜ ನಾಯಕ ಮಾತನಾಡಿ, ಇತ್ತೀಚೆಗೆ ಭತ್ತದ ಕೃಷಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಒಂದಾನುವೇಳೆ ಅಕ್ಕಿಯ ಅಭಾವ ಎದುರಾಗಿದ್ದಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ತಲೆಕೆಳಗಾಗಬಹುದು ಆದ್ದರಿಂದ ಸರಕಾರ ಬತ್ತದ ಕೃಷಿಗೆ ಹೆಚ್ಚಿನ ಒತ್ತನ್ನು ನೀಡಬೇಕಾಗಿದೆ, ಶಾಲೆಗಳಲ್ಲೂ ಕೂಡ ಮಕ್ಕಳಿಗೆ ಕೃಷಿಯ ಮಹತ್ವವನ್ನು ಕಲಿಸುವದು ಹೆಚ್ಚು ಸೂಕ್ತ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಮಟಾ ಡಯಟ್ ಪ್ರಾಚಾರ್ಯ ಎನ್.ಜಿ.ನಾಯಕ ಮಾತನಾಡಿ, ಉತ್ತಮ ಸ್ವಾಸ್ಥ್ಯಕ್ಕಾಗಿ ಸ್ಥಳೀಯ ಆಹಾರ ಪದ್ಧತಿಗಳನ್ನು ಉಪಯೋಗಿಸಲು ಸಾಂಪ್ರದಾಯಿಕ ಕೃಷಿ ಉತ್ಪನ್ನಗಳನ್ನೇ ಬೆಳೆಯುವದು ಹೆಚ್ಚು ಸೂಕ್ತ ಎಂದರು.
ಬೆಳೆಗಾರರ ಸಮಿತಿಯ ಅಧ್ಯಕ್ಷ ನಾಗರಾಜ ನಾಯಕ ಮಾತನಾಡಿ, ಭತ್ತಕ್ಕೆ ಕೋಟ್ಯಾಂತರ ವರ್ಷಗಳ ಇತಿಹಾಸವಿದೆ ಆದರೆ ಇಂದು ಸಾವಿರಾರು ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ನಿಂತು ಹೋಗಿದೆ. ಇದು ಹೀಗೆಯೇ ಮುಂದುವರಿದರೆ ಅಕ್ಕಿಯ ಕೊರತೆ ಕಂಡುಬರಲಿದೆ. 140 ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡುತ್ತಿದ್ದ ಏಕೈಕ ದೇಶ ಭಾರತ ಮುಂದಾಲೋಚನೆಯಿAದ ರಫ್ತನ್ನು ನಿಲ್ಲಿಸಿದೆ ಹೀಗಾಗಿ ಭತ್ತದ ಬೆಳೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.
ಪದ್ಮಶ್ರೀ ಡಾ.ತುಳಸೀ ಗೌಡ ಅವರು ಹೊಂಗೆ ಗಿಡವನ್ನು ಮಕ್ಕಳಿಗೆ ನೀಡುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ.ತುಳಸೀ ಗೌಡ, ಪರಿಸರ ವಿಜ್ಞಾನಿ ಡಾ.ಎಮ್.ಡಿ ಸುಭಾಷಚಂದ್ರನ್, ಕುಮಟಾದ ಮಾದರಿ ಕೃಷಿಕ ನಾಗರಾಜ ನಾಯ್ಕ, ಕೃಷಿಕರಾದ ಬೀದಿ ಗಾಂವಕರ, ಬೆಳ್ಯ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ, ವಲಯ ಅರಣ್ಯಾಧಿಕಾರಿ ಗಣಪತಿ ವಿ.ನಾಯಕ, ಮರೈನ್ ಬಯಾಲಜಿ ಮಹಾವಿದ್ಯಾಲಯದ ನಿವೃತ್ತ ಪ್ರಧ್ಯಾಪಕ ವಿ ಎನ್ ನಾಯ್ಕ, ದಿನಕರ ವೇದಿಕೆಯ ಅಧ್ಯಕ್ಷ ರವೀಂದ್ರ ಕೇಣಿ, ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ ಉಪಸ್ಥಿತರಿದ್ದು ಮಾತನಾಡಿದರು.
ವೇದಿಕೆಯಲ್ಲಿ ಪುರಸಭೆಯ ಸದಸ್ಯೆ ಶೀಲಾ ಶೆಟ್ಟಿ, ಬೆಳೆಗಾರರ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಹೆಗಡೆ, ನಾಡವರ ಸಂಘದ ಅಧ್ಯಕ್ಷ ಆರ್ ಟಿ ಮಿರಾಶಿ, ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಉರಗ ಸಂರಕ್ಷಕ ಮಹೇಶ ನಾಯ್ಕ, ರಾಮಚಂದ್ರ ಹೆಗಡೆ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ನಿವೃತ್ತ ಉಪನ್ಯಾಸಕ ವಸಂತ ನಾಯಕ, ವೆಂಟು ಮಾಸ್ತರ, ದೇವರಾಯ ನಾಯಕ, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ಕೆ ಬಂಟ, ನಾಗಾನಂದ ಬಂಟ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕ ಸುಧೀರ ನಾಯಕ ಹಾಗೂ ಶಾಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮ ಸಂಘಟಿಸಿದರು.
ಸೌಜನ್ಯ ಸಿದ್ಧಿ ಪ್ರಾರ್ಥಿಸಿದರು, ಶಿವಾನಿ ಸಂಗಡಿಗರು ರೈತಗೀತೆ ಹಾಡಿದರು. ಶಿಕ್ಷಕ ಚಂದ್ರಕಾಂತ ಗಾಂವಕರ ಸ್ವಾಗತಿಸಿದರು. ರಾಜೇಶ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ನಂತರ ಎಲ್ಲ ಅತಿಥಿಗಳು ಹಾಗೂ ಶಾಲಾ ಮಕ್ಕಳು ಸೇರಿ ಸಾಮೂಹಿಕವಾಗಿ ಗದ್ದೆಗಿಳಿದು ಕಗ್ಗ ಭತ್ತದ ಸಸಿಗಳನ್ನು ನಾಟಿ ಮಾಡಿದರು.