ಶಿರಸಿ: ವಿದ್ಯಾರ್ಥಿಗಳು ಶಿಸ್ತು, ಕಠಿಣ ಪರಿಶ್ರಮ ಮೈಗೂಡಿಸಿಕೊಂಡು ಸಾಧನೆ ಮಾಡುವ ಮೂಲಕ ತಂದೆ ತಾಯಿ ಕನಸುಗಳನ್ನು ಸಕಾರಗೊಳಿಸಬೇಕು ಎಂದು ಡಿವೈಎಸ್ಪಿ ಕೆ.ಎಲ್.ಗಣೇಶ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಯುವ ರೆಡ್ ಕ್ರಾಸ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಉದ್ಯೋಗ ಪಡೆಯುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಅದಕ್ಕೆ ನಿರಂತರ ಪರಿಶ್ರಮದ ಅಗತ್ಯವಿದೆ. ಶಿಸ್ತಿಲ್ಲದ ವ್ಯಕ್ತಿ ಬೆಳೆಯಣಿಗೆಯಾಗಲು ಸಾಧ್ಯವಿಲ್ಲ. ಅದರಲ್ಲೂ ವಿದ್ಯಾರ್ಥಿಗಳಿಗೆ ಶಿಸ್ತು ಅತ್ಯಗತ್ಯವಾಗಿದೆ. ಸೈಬರ್ ಕ್ರೈಮ್ ಬಗ್ಗೆ ಯುವ ಜನತೆ ಎಚ್ಚರವಾಗಬೇಕು ಎಂದರು.
ಲೇಖಕಿ ಡಾ.ಕುಮುದಾ ಶರ್ಮಾ ಮಾತನಾಡಿ, ವಿದ್ಯಾರ್ಥಿಗಳಿಗೆ ಭೌತಿಕ ಸೌಂದರ್ಯದಾಚೆಗೆ ಆಂತರಿಕ ಸೌಂದರ್ಯ ಅಗತ್ಯವಾಗಿದೆ. ನಿರಂತರವಾಗಿ ಸಹಾಯ, ಸಂಯಮದ ಜೀವನ ನಮ್ಮದಾಗಿಸಿಕೊಂಡಾಗ ಸಾರ್ಥಕತೆ ಸಿಗುತ್ತದೆ ಎಂದರು.
ಪ್ರಾಂಶುಪಾಲರಾದ ಪ್ರೊ.ದಾಕ್ಷಾಯಣಿ ಜಿ.ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಸತೀಶ್ ಎನ್.ನಾಯ್ಕ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕ ಡಾ.ಸಿ.ಎಸ್.ಲೋಕೇಶ್, ಕ್ರೀಡಾ ವೇದಿಕೆ ಸಂಚಾಲಕ ವಿ.ಬಿ.ಭುವನೇಶ್ವರ್, ರೇಂಜರ್ ಲೀಡರ್ ವಿಜಯಲಕ್ಷ್ಮಿ ದಾನರೆಡ್ಡಿ, ಯುವ ರೆಡ್ ಕ್ರಾಸ್ ಸಂಚಾಲಕ ಡಾ.ಆರ್.ಕೆಂಚಪ್ಪ, ಎನ್‌ಎನ್‌ಎಸ್ ಯೋಜನಾಧಿಕಾರಿ ಡಾ.ವಸಂತನಾಯ್ಕ್ ವಾರ್ಷಿಕ ವರದಿ ವಾಚಿಸಿದರು.
ಕುಳವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜಿತಾ ಹೆಗಡೆ ಮಾತನಾಡಿದರು. ಕನ್ನಡ ಸಾಹಿತ್ಯ ವೇದಿಕೆ ಸಂಚಾಲಕ ಬಿ.ಪ್ರಕಾಶ್, ಸಾಹಿತ್ಯ ವೇದಿಕೆ ಸಂಚಾಲಕಿ ಆಶಾ ಗೌಡರ್ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿದ್ದರು. ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ಸಹಾಯಕ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ, ಕ್ರೀಡಾ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳು ಪ್ರಾರ್ಥಿಸಿದರೆ ಉಪನ್ಯಾಸಕಿ ಜಯಶ್ರೀ ನಾಯ್ಕ್ ಮತ್ತು ದಿವ್ಯಾ ಹೆಗಡೆ ನಿರೂಪಿಸಿದರು. ಮಧು ಪುರತಗೇರಿ ಕೊನೆಯಲ್ಲಿ ವಂದಿಸಿದರು.