ಅಂಕೋಲಾ: ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರದಲ್ಲಿ ದೋಣಿ ಮುಗುಚಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿ ಇಬ್ಬರೂ ಮೀನುಗಾರರು ಗಾಯಗೊಂಡ ಘಟನೆ ಸೋಮವಾರ ನಸುಕಿನಲ್ಲಿ ಸಂಭವಿಸಿದೆ. ಹಾರವಾಡದ ಗಾಬೀತವಾಡದ ಬಾಬು ಯಶವಂತ ಟಾಕೇಕರ ಮತ್ತು ಸೋಮನಾಥ ಸೂರ್ಯಕಾಂತ ಸಾದಿಯೇ ಗಾಯಗೊಂಡ ಮೀನುಗಾರರು. ಈರ್ವರು ಶ್ರೀಲಕ್ಷ್ಮೀ ರವಳನಾಥ ನಾಡದೋಣಿಯಲ್ಲಿ ಸೋಮವಾರ ನಸುಕಿನಲ್ಲಿ 4 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದರು. ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದಾಗ ದುರ್ಘಟನೆ ಸಂಭವಿಸಿದೆ. ಸಮುದ್ರಕ್ಕೆ ಹಾಕಿದ ಬಲೆಯನ್ನು ಮೇಲೆತ್ತಿ ದೋಣಿಯಲ್ಲಿ ತುಂಬಿಸುವಾಗ ಅಲೆಗಳ ರಭಸಕ್ಕೆ ದೋಣಿ ಮಗುಚಿಬಿದ್ದಿದೆ. ಈ ಘಟನೆಯಿಂದ ದೋಣಿಯು ಸಂಪೂರ್ಣವಾಗಿ ಹಾನಿಗೊಂಡಿದೆ.
ದೋಣಿಯಲ್ಲಿನ 80,000 ಮೌಲ್ಯದ ಬಲೆ, 1.50 ಲಕ್ಷ ಮೌಲ್ಯದ ಇಂಜಿನ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದೆ. ಒಟ್ಟಾರೆ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಹಾನಿ ಅಂದಾಜಿಸಲಾಗಿದೆ. ನಸುಕಿನ ವೇಳೆ ಎಂಟು ದೋಣಿಗಳು ಸಹಚರರಂತೆ ಮೀನುಗಾರಿಕೆಗೆ ತೆರಳಿದ್ದರು.
ದೋಣಿ ಸಮುದ್ರದಲ್ಲಿ ಮುಳುಗುತ್ತಿದ್ದಂತೆ ಸಹಾಯಕ್ಕೆ ಧಾವಿಸಿದ ಉಳಿದ ಮೀನುಗಾರರು ಶ್ರೀ ಲಕ್ಷ್ಮೀ ರವಳನಾಥ ದೋಣಿಯಲ್ಲಿದ್ದ, ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಮೀನುಗಾರರನ್ನು ಮತ್ತು ದೋಣಿಯನ್ನು ರಕ್ಷಣೆ ಮಾಡಿದ್ದಾರೆ. ಮೀನುಗಾರರ ನೆರವು ಇಲ್ಲದೆ ಹೋದರೆ ಇನ್ನೂ ಹೆಚ್ಚಿನ ಅವಘಡ ಸಂಭವಿಸುತ್ತಿತ್ತು. ಗಾಯಗೊಂಡ ಮೀನುಗಾರರಿಬ್ಬರನ್ನು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.
ಘಟನೆಯ ಕುರಿತು ಸ್ಥಳೀಯ ಮೀನುಗಾರ ಮುಖಂಡ ಗಣರಾಜ ಟಾಕೇಕರ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮತ್ತು ಇತರ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೋಲಿಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಅರ್ಜಿ ಪಡೆದು ಅರ್ಹ ಪರಿಹಾರದ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ತಿಳಿಸಿದ್ದಾರೆ.