ಶಿರಸಿ: ಇಲ್ಲಿಮ ಎಂಇಎಸ್’ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಾರ್ಷಿಕೋತ್ಸವ ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಮಾತನಾಡಿ ನಮ್ಮ ಸಂಸ್ಥೆಯಿಂದ ಕಳೆದ ಆರು ದಶಕದಿಂದ ಸಮಾಜಕ್ಕೆ ಉತ್ತಮ ವ್ಯಕ್ತಿತ್ವ ಹೊಂದಿದ ನಾಗರಿಕರನ್ನು ನೀಡುತ್ತಿದ್ದೇವೆ. ಇಲ್ಲಿ ಓದಿ ಹೋದವರು ಉನ್ನತ ಸ್ಥಾನದಲ್ಲಿದ್ದಾರೆ. ಇಂದು ನಮಗೆ ನಮ್ಮ ಪದವಿ ದಿನಗಳು ನೆನಪಿಗೆ ಬರುತ್ತಿದೆ.ವಿದ್ಯಾರ್ಥಿಗಳ ಸಂಖ್ಯೆ ಅತೀ ಹೆಚ್ಚಿದ್ದ ಕಾಲವದು. ಗುರುಗಳನ್ನು ಕಂಡರೆ ಒಂದು ಭಕ್ತಿಯ ಭಯವಿತ್ತು. ಗೌರವಿಸುವವರ ಸಂಖ್ಯೆಯೂ ಹೆಚ್ಚಿತ್ತು. ಶಿಸ್ತು, ಸಂಸ್ಕಾರ, ಸಂಸ್ಕೃತಿ ನಮ್ಮಲ್ಲಿ ಹೆಚ್ಚಿತ್ತು. ಇಂದು ಅದರ ಕೊರತೆ ನಮಗೆ ಎದ್ದು ಕಾಣುತ್ತಿದೆ. ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ಶಿಸ್ತುಬದ್ಧ ಜೀವನ ಶೈಲಿ ಮುಖ್ಯವಾಗುತ್ತದೆ. ಅದನ್ನು ನೀವು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಸಾಧಿಸಿ ಎಂದರು.
ಉಪ ಸಮಿತಿ ಅಧ್ಯಕ್ಷ ಎಸ್.ಕೆ. ಭಾಗವತ್ ಮಾತನಾಡಿ ಹಬ್ಬದ ದಿನದಂದು ಮನೆಯನ್ನು ಶೃಂಗರಿಸಿದ ಹಾಗೆ ಇಂದು ಕಾಲೇಜು ಶೃಂಗಾರಗೊಂಡಿದ್ದು ಹಬ್ಬದ ಸಂಭ್ರಮ ಎದ್ದು ಕಾಣುತ್ತಿದೆ. ಪದವಿ ಮುಗಿಸಿದ ನೀವು ಸಮಾಜಕ್ಕೆ ನಾವೇನು ಕೊಡುಗೆ ನೀಡಬೇಕೆಂಬ ಯೋಚನೆಯನ್ನು ಮಾಡಬೇಕು. ಆ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಬೇಕು. ಜೀವನವನ್ನು ವ್ಯವಸ್ಥಿತವಾಗಿ ನಡೆಸಲು ಬೇಕಾದ ಬೌದ್ಧಿಕತೆ ನಿಮ್ಮಲ್ಲಿದೆ ಅದನ್ನು ಸರಿಯಾಗಿ ಬಳಸಿಕೊಳ್ಳಿ ಎಂದರು.
ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ ಮಾತನಾಡಿ ಇಂದು ಸಮಾಜ ವಿಕೃತಿ ಎಡೆಗೆ ಸಾಗುತ್ತಿದೆ. ಹೆತ್ತ ಮಕ್ಕಳೇ ತಂದೆ ತಾಯಿಯನ್ನು ದೂರ ಇಡುವ ಕೆಟ್ಟ ಸಂಸ್ಕೃತಿ ತಲೆ ಎತ್ತಿದೆ. ನೀವೆಲ್ಲ ಗುರುಹಿರಿಯರನ್ನು ಪ್ರೀತಿಯಿಂದ ಕಾಣುವುದಲ್ಲದೆ, ತಂದೆ ತಾಯಿಯರನ್ನು ಕೊನೆವರೆಗೂ ಕೈಬಿಡದೆ ಸುಸಂಸ್ಕೃತ ಶಿಸ್ತು ಬದ್ಧ ಜೀವನವನ್ನು ನಿಮ್ಮದಾಗಿಸಿಕೊಳ್ಳಿ. ಓದಿದ ಶಿಕ್ಷಣ ಸಂಸ್ಥೆಯನ್ನು ಮರೆಯದಿರಿ ಎಂದರು. ಕುಮಾರಿ ಗಾಯತ್ರಿ ರೆಡ್ಡಿ ಸ್ವಾಗತಿಸಿ ನಿರೂಪಿಸಿದರು. ಡಾ.ಕೆ.ಜಿ.ಭಟ್ ವಂದಿಸಿದರು.