ಮುಂಡಗೋಡ: ಪಟ್ಟಣದ ಜ್ಯೋತಿ (ಕ್ರಿಶ್ಚಿಯನ್) ಆಸ್ಪತ್ರೆಯ ಮುಂಭಾಗದಲ್ಲಿನ ತೊಟ್ಟಿಲಿನಲ್ಲಿ ಮೂರು ದಿನದ ನವಜಾತ ಶಿಶುವೊಂದು ಪತ್ತೆಯಾಗಿದೆ. ಜ್ಯೋತಿ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ತೊಟ್ಟಿಲನ್ನು ಇಡಲಾಗಿದ್ದು, ಮಗುವನ್ನು ಸಾಕಲು ಸಾಧ್ಯವಾಗದವರು ತಮ್ಮ ಮಗುವನ್ನು ಈ ತೊಟ್ಟಿಲಲ್ಲಿ ಹಾಕುವಂತೆ ನಾಮಫಲಕವನ್ನು ಹಾಕಲಾಗಿದೆ. ಇದೇ ತೊಟ್ಟಿಲಿನಲ್ಲಿ ಮಗುವನ್ನ ಇಟ್ಟು ಹೋಗಲಾಗಿದೆ. ನವಜಾತ ಶಿಶು ಅಳುತ್ತಿರುವ ಶಬ್ದ ಕೇಳಿದ ಆಸ್ಪತ್ರೆಯವರು ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಶಿರಸಿ ದತ್ತು ಕೇಂದ್ರಕ್ಕೆ ಮಗುವನ್ನ ನೀಡಲು ಕ್ರಮ ಕೈಗೊಂಡಿದ್ದಾರೆ.
ಯಾರೋ ನವಜಾತ ಶಿಶುವನ್ನು ಸಾಕಲು ಆಗದೆ ಇದ್ದ ಕಾರಣಕ್ಕೆ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ದೀಪಾ ಬಂಗೇರ, ಪೊಲೀಸ್ ಇಲಾಖೆಯ ಕ್ರೈಂ ಪಿಎಸ್‌ಐ ಎಚ್.ಬಿ.ಕುಡಗುಂಟಿ ಹಾಗೂ ಸಿಬ್ಬಂದಿಗಳು ಇದ್ದರು.