ಶಿರಸಿ: ಜಿಲ್ಲೆಯ ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಇದನ್ನು ಕೆಲವೇ ತಿಂಗಳಲ್ಲಿ ಸರಿಪಡಿಸುವುದಾಗಿ ಶಾಸಕ ಭೀಮಣ್ಣ ನಾಯ್ಕ್ ಭರವಸೆ ನೀಡಿದರು.
ಅವರು ಕೋಳಿಗಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿನೀಡಿ ಶಾಲೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಮನವಿ ಸ್ವೀಕರಿಸಿದರು. ಈ ವೇಳೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಸಲ್ಲಿಸಿದ ಮನವಿ ಸ್ವೀಕರಿಸಿದ ಅವರು, ಶಾಲೆಗೆ ಹೆಚ್ಚುವರಿಯಾಗಿ ಒಬ್ಬ ಶಿಕ್ಷಕರನ್ನು ನೇಮಕ ಮಾಡಲು ಸೂಚಿಸುವುದಾಗಿ ಭರವಸೆ ನೀಡಿದರು.
ಮನವಿಯಲ್ಲಿ ಶಾಲೆಯಲ್ಲಿ 62 ವಿದ್ಯಾರ್ಥಿಗಳಿದ್ದು, ಇಬ್ಬರು ಖಾಯಂ ಶಿಕ್ಷಕರು ಹಾಗೂ ಒಬ್ಬ ಡೆಪ್ಯುಟಿ ಶಿಕ್ಷಕರಿದ್ದಾರೆ. ಹಿರಿಯ ಪ್ರಾಥಮಿಕ ಶಾಲೆ ಇದಾಗಿರುವುದರಿಂದ ಸೀಘ್ರದಲ್ಲಿ ಒಬ್ಬ ಶಿಕ್ಷಕರನ್ನು ನೇಮಕ ಮಾಡಿಕೊಡುವಂತೆ ಒತ್ತಾಯಿಸಿದ್ದರು. ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿ: 75ಕ್ಕೂ ಹೆಚ್ಚು ವರ್ಷ ಹಳೆಯದಾದ ಶಾಲೆ ಇದಾಗಿದ್ದು, ಶಾಲೆಯ ಮೇಲ್ ಛಾವಣಿಗೆ ಗೆದ್ದಲು ಹಿಡಿದಿದೆ. ಮಣ್ಣಿನಗೋಡೆಗೆ ನೂತನ ಕಟ್ಟಡಕ್ಕೆ ಅನುದಾನ ನೋಡುವಂತೆ ಮನವಿ ಎಸ್‌ಡಿಎಂಸಿ ಅಧ್ಯಕ್ಷ ಶಿವಸುತ ಹೆಗಡೆ ಮುರೇಗಾರ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಶಾಸಕರು ಶಾಲೆಯ ಕುಂದುಕೊರತೆ ನೀಗುವ ಕೆಲಸ ಮಾಡಲಾಗುವುದು. ಮಧುಬಂಗಾರಪ್ಪ ಶಿಕ್ಷಣ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸದ್ಯ ಶಾಲೆ ಮಕ್ಕಳ ಬಿಸಿಯೂಟಕ್ಕೆ ಅನುಕೂಲ ಆಗುವಂತೆ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಜರುಗಿಸುವುದಾಗಿ ತಿಳಿಸಿದರು. ಮಕ್ಕಳೊಂದಿಗೆ ಮಾತು: ಶಾಲೆಯನ್ನು ವೀಕ್ಷಿಸಿದ ಶಾಸಕರು, ಕೆಲ ತರಗತಿಗಳಿಗೆ ತೆರಳಿ ಮಕ್ಕಳೊಂದಿಗೆ ಮಾತುಕತೆ ನಡೆಸಿದರು. ಊಟ ಹೇಗಿದೆ? ಪಾಠ ಅರ್ಥ ಆಗುತ್ತಿದೆಯಾ ಎಂದು ಕೇಳಿ ತಿಳಿದುಕೊಂಡರು. ಮೊದಲ ಬಾರಿಗೆ ಶಾಲೆಗೆ ಬಂದ ಶಾಸಕ ಭೀಮಣ್ಣ ನಾಯ್ಕ್ ಅವರನ್ನು ಶಾಲಾ ಅಭಿವೃದ್ಧಿ ಮಂಡಳಿವತಿಯಿAದ ಶಾಲು ಹೊದೆಸಿ ಸನ್ಮಾನಿಸಲಾಯಿತು.
ಶಾಸಕರು ಹೆಗಡೆಕಟ್ಟಾ ಮತ್ತು ಮೇಲಿನ ಓಣಿಕೇರಿ ಶಾಲೆಗೂ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಈ ವೇಳೆ ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ಶಿವಾಸುತ ಹೆಗಡೆ ಮುರೇಗಾರ, ತಹಸೀಲ್ದಾರ, ಬಿಇಒ ನಾಗರಾಜ ನಾಯ್ಕ್, ಶ್ರೀನಿವಾಸ ಹೆಗಡೆ, ಮಹಿಮಾ ಹೆಗಡೆ, ಲತಾ ಮೊಗೇರ ಇದ್ದರು.