ಅಂಕೋಲಾ: ಹಲವಾರು ವರ್ಷಗಳಿಂದ ತಾಲೂಕಿನ ಕೆಡಿಸಿಸಿ ಬ್ಯಾಂಕ್‌ನ ಡಿವಿಜನಲ್ ಆಫೀಸರ್ ಹಾಗೂ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ ನಾಗೇಶ ನಾಯಕ ಅವರು ನಿವೃತ್ತಿಯಾಗಿರುವುದರಿಂದ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ವ್ಯವಸ್ಥಾಪಕ ಲಕ್ಷ್ಮಣ ಕೆ. ಗೌಡ ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು. ಹಿಚ್ಕಡ ಸೇವಾ ಸಹಕಾರಿ ಸಂಘದ ಸೆಕ್ರೆಟರಿ ಮಾತನಾಡಿ ನಾಗೇಶ ರಾಮಚಂದ್ರ ನಾಯಕ ಅವರು ಸರಕಾರದ ವಯಸ್ಸಿನ ನಿಗದಿಯಿಂದ ನಿವೃತ್ತಿಯಾಗಿದ್ದಾರೆ ಹೊರತು ಅವರಲ್ಲಿರುವ ಕಾರ್ಯಕ್ಷಮತೆ ಹಾಗೂ ಉತ್ಸಾಹ ಇನ್ನೂ ಮಾಸಿಲ್ಲ ಮನಸ್ಸು ಮಾಡಿದರೆ ಇನ್ನು ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸುವ ಕ್ಷಮತೆ ಇದೆ ಎಂದರು.
ಕೆಡಿಸಿಸಿ ಬ್ಯಾಂಕ್ ಸಿಬ್ಬಂದಿ ಎಂ.ಎಚ್.ಭವ್ಯ ಮಾತನಾಡಿ ನಾಗೇಶ ನಾಯಕ ಅವರಿಗೆ 60 ವರ್ಷವಾಗಿದೆ ಎನ್ನುವುದಕ್ಕಿಂತ 48ರ ನಂತರ 12 ವರ್ಷ ಹೆಚ್ಚಿನ ಅನುಭವ ಆಗಿದೆ. ಯಾಕೆಂದರೆ 48ರ ಹರೆಯದ ವ್ಯಕ್ತಿ ಆಡಳಿತಾತ್ಮಕ ಕಾರ್ಯದಲ್ಲಿ ಎಷ್ಟು ಕ್ರಿಯಾಶೀಲರಾಗಿರುತ್ತಾರೋ ಅಷ್ಟೇ ಕ್ರಿಯಾಶೀಲತೆ ಅವರಲ್ಲಿ ಕಾಣುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಡಿಸಿಸಿ ಬ್ಯಾಂಕ್ ಸಿಬ್ಬಂದಿ ತಾಲೂಕಾ ಪ್ರಾಥಮಿಕ ಸಹಕಾರಿ ಸಂಘ, ಬೇಲೆಕೇರಿ ಸೇವಾ ಸಹಕಾರಿ ಸಂಘ, ಕೆಡಿಸಿಸಿ ಬ್ಯಾಂಕ್ ಅಂಕೋಲಾ ಹಾಗೂ ಬಂಕಿಕೊಡ್ಲ ಶಾಖೆಯ ಸಿಬ್ಬಂದಿ ಸೇರಿದಂತೆ ವಿವಿಧ ಸಹಕಾರಿ ಸಂಘಗಳ ಮುಖ್ಯಸ್ಥರು ಗೌರವಪೂರಕವಾಗಿ ಸನ್ಮಾನ ಮಾಡಿ ಅವರ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಕೆಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಬೀರಣ್ಣ ನಾಯಕ ಮಾತನಾಡಿ ಬ್ಯಾಂಕ್ ಕೊಟ್ಟಂತಹ ಎಲ್ಲ ಜವಾಬ್ದಾರಿಗಳನ್ನು ಸಮನಾಗಿ ನಿಭಾಯಿಸಿ ಬ್ಯಾಂಕಿನ ಅಭಿವೃದ್ಧಿಗೆ ಕಾರಣರಾಗಿದ್ದಕ್ಕೆ ನಾಗೇಶ ನಾಯಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ನಿವೃತ್ತಿಯಾಗಿ ಸನ್ಮಾನ ಸ್ವೀಕರಿಸಿದ ನಾಗೇಶ ನಾಯಕ, ನನ್ನ 34 ವರ್ಷಗಳ ಸುಧೀರ್ಘ ಸೇವೆಯಲ್ಲಿ ಹಲವಾರು ಹೊಸ ಹೊಸ ವಿಷಯಗಳನ್ನು ಕಲಿತಿದ್ದೇನೆ ಅದರಲ್ಲಿಯೂ ಅಂಕೊಲಾದಲ್ಲಿ ಸೇವೆ ಸಲ್ಲಿಸುವಾಗ ಪ್ರತಿಯೊಬ್ಬರೂ ಸಹ ಅಗಮ್ಯ ಸಹಕಾರ ನೀಡಿ ಸಹಕರಿಸಿದ್ದಾರೆ. ನಿಷ್ಠುರವಾಗಿ ಮಾತನಾಡಿದ್ದಾರೆ ಅದು ಕೇವಲ ಆಡಳಿತ ಹಿತದೃಷ್ಟಿಯಿಂದ ಹೊರತು ಯಾವುದೇ ವಯಕ್ತಿಕ ಸಿಟ್ಟಿನಿಂದಲ್ಲ, ಹಾಗಾಗಿ ನನ್ನ ಕರ್ತವ್ಯದ ಕೊನೆಯ ಅವಧಿಯಲ್ಲಿ ಎಲ್ಲಾ ಸಿಬ್ಬಂದಿಗಳು, ಗ್ರಾಹಕರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಭಾವುಕರಾದರು.
ಇದೇ ಸಂದರ್ಭದಲ್ಲಿ ಕೆಡಿಸಿಸಿ ಬ್ಯಾಂಕ್‌ನ ನೂತನ ವ್ಯವಸ್ಥಾಪಕರಾಗಿ ಆಗಿ ದೀಪಾ ಎಂ.ನಾಯಕ ಪದೋನ್ನತಿ ಹೊಂದಿದರು. ಕೆಡಿಸಿಸಿ ಬ್ಯಾಂಕ್‌ನ ವಿವಿಧ ಶಾಖೆಯ ಸಿಬ್ಬಂದಿಗಳು, ವಿವಿಧ ಸಹಕಾರಿ ಸಂಘಗಳ ಮುಖ್ಯಸ್ಥರು ಹಾಗೂ ಆಪ್ತರು ಉಪಸ್ಥಿತರಿದ್ದರು.