ಕುಮಟಾ: ತಾಲೂಕಿನ ಮಿರ್ಜಾನ, ಕೋಡ್ಕಣಿ, ಬರ್ಗಿ ಹಾಗೂ ದೀವಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಸತಿ ಯೋಜನೆಯ 82 ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಅವರು ಕಾಮಗಾರಿ ಆದೇಶ ಪತ್ರ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಸೂಕ್ತ ವಸತಿ ವ್ಯವಸ್ಥೆ ಇಲ್ಲದ ಬಡ ಕುಟುಂಬಗಳಿಗೆ ಅನುಕೂಲವಾಗಬೇಕೆಂದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಯೋಜನೆಯನ್ನು ನೀಡಲಾಗಿದೆ. ಹಿಂದಿನ ಅವಧಿಯಲ್ಲಿ ನಮ್ಮ ವಿಧಾನಸಭಾ ಕ್ಷೇತ್ರಕ್ಕೆ 2,000 ಹೆಚ್ಚುವರಿ ಮನೆಗಳನ್ನು ತಂದಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಂದಿನ ವಸತಿ ಸಚಿವ ವಿ.ಸೋಮಣ್ಣ ಅವರು ಸ್ಮರಣೀಯರು. ಫಲಾನುಭವಿಗಳೆಲ್ಲರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಿಂದಿನ ಸರ್ಕಾರದ ಅವಧಿಯಲ್ಲಿ ವಸತಿಯೋಜನೆಯಲ್ಲಿ ಅತಿಹೆಚ್ಚು ಮನೆಗಳು ಮಂಜೂರಾಗಿದ್ದು, ವಸತಿರಹಿತರಿಗೆ ಇದರಿಂದ ಅನುಕೂಲವಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಸರ್ಕಾರದ ನಿಯಮನುಸಾರ ಮನೆಯನ್ನು ನಿರ್ಮಿಸಿ ಎಂದು ಫಲಾನುಭವಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರ್ ಪಟಗಾರ, ರಾಜೇಶ ಪಟಗಾರ, ವಿಶಾಲಾಕ್ಷಿ ಪಟಗಾರ, ನಾಗವೇಣಿ ಅಂಬಿಗ, ಉಪಾಧ್ಯಕ್ಷರಾದ ಸೀತಾ ಭಟ್, ದೇವಿ ಮುಕ್ರಿ, ಭಾರತಿ ಹರಿಕಾಂತ, ತಾ. ಪಂ. ಸಹಾಯಕ ಲೆಕ್ಕಾಧಿಕಾರಿ ನಾರಾಯಣ ಪಟಗಾರ, ಭಾರತೀಯ ಜನತಾ ಪಾರ್ಟಿಯ ಸ್ಥಳೀಯ ಪ್ರಮುಖರು, ಪಂಚಾಯತ್ ಸದಸ್ಯರುಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.