ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಮತ್ತು ರೋಟರಿ ಕ್ಲಬ್ ದಾಂಡೇಲಿ ಇವರ ಸಂಯುಕ್ತಾಶ್ರಯದಡಿ ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ರಾಜಸ್ಥಾನದ ಡಾ.ರಾಮ ಮನೋಹರ್ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನ್ ವತಿಯಿಂದ ಒಂದು ವಾರಗಳವರೆಗೆ ನಡೆಯಲಿರುವ ಉಚಿತ ಅಕ್ಯೂಪ್ರೆಶರ್ ಮತ್ತು ಸುಜೋಕ ಥೆರಪಿ ಚಿಕಿತ್ಸಾ ಶಿಬಿರವನ್ನು ದಾಂಡೇಲಿಯ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಸೋಮವಾರ ಬೆಳಿಗ್ಗೆ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಆಧುನಿಕತೆ ಬೆಳೆದಂತೆ ಇಂದು ರೋಗಗಳು ಮೀತಿಮೀರಿಯಾಗಿ ಬೆಳೆಯತೊಡಗಿದೆ. ಸದಾ ಒತ್ತಡ, ತುಡಿತದ ನಡುವೆ ಬದುಕು ಸವೆಸುವ ನಾವು ನಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಆರೋಗ್ಯವಂತ ಸಮಾಜದಿಂದ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ. ಇವತ್ತಿನ ದಿನಮಾನಗಳಲ್ಲಿ ರೋಗಗಳು ಯಾವುದೇ ವಯಸ್ಸಿನ ವ್ಯಕ್ತಿಗಳನ್ನು ಬಾಧಿಸುತ್ತಿದ್ದು, ರೋಗ ರುಜಿನಗಳಿಗೆ ಇತ್ತೀಚಿನ ವರ್ಷಗಳಲ್ಲಿ ವಯಸ್ಸಿನ ಮೀತಿ ಎಂಬುವುದೇ ಇಲ್ಲವಾಗಿದೆ. ಇದಕ್ಕೆ ಕಾರಣ, ನಮ್ಮ ಬದುಕಿನ ರೀತಿ-ನೀತಿಗಳು ಮತ್ತು ಆಹಾರ ಪದ್ಧತಿಗಳೆ ಆಗಿವೆ. ಈ ನಿಟ್ಟಿನಲ್ಲಿ ಆಯಸ್ಸು ವರ್ಧನೆಗೆ ಆಕ್ಯೂಪ್ರೆಶರ್ ಮತ್ತು ಸುಜೋಕ ಥೆರಪಿ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗದೆ ಮಾತ್ರವಲ್ಲದೇ ಶಾಶ್ವತವಾಗಿ ನಮ್ಮ ಹತ್ತಿರ ರೋಗ ರುಜಿನಗಳು ಬರದಂತೆ ಬಹುದೊಡ್ಡ ತಡೆಗೋಡೆಯಾಗಿ ಕೆಲಸ ನಿರ್ವಹಿಸುತ್ತದೆ. ಇಂಥಹ ಶಿಬಿರಗಳು ಮೇಲಿಂದ ಮೇಲೆ ನಡೆಯಬೇಕೆಂದು ಕರೆ ನೀಡಿ, ಶಿಬಿರಕ್ಕೆ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ರೋಟರಿ ಕ್ಲಬಿನ ಅಧ್ಯಕ್ಷರಾದ ಜೋಸೆಫ್ ಗೋನ್ಸಾಲಿಸ್ ವಹಿಸಿ ಮಾತನಾಡುತ್ತಾ, ಈ ಶಿಬಿರದಲ್ಲಿ ರೋಟರಿ ಕ್ಲಬ್ ಜೊತೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಸರ್ವ ರೀತಿಯ ಸಹಕಾರವನ್ನು ನೀಡಿರುವುದರಿಂದ ಈ ಶಿಬಿರವನ್ನು ಆಯೋಜಿಸಲು ಸುಲಭ ಸಾಧ್ಯವಾಯಿತೆಂದರು.
ಡಾ.ರಾಮ ಮನೋಹರ್ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನ್ ಇಲ್ಲಿಯ ತಜ್ಞ ರವೀಂದ್ರ ಕುಮಾರ್ ಮಾತನಾಡಿ ಯಾವುದೇ ಔಷಧಿಯಿಲ್ಲದೇ ರೋಗ ರುಜಿನಗಳನ್ನು ನಿಯಂತ್ರಿಸುವುದೇ ಅಕ್ಯೂಪ್ರೆಶರ್ ಮತ್ತು ಸುಜೋಕ ಥೆರಪಿಯ ಪ್ರಮುಖ ಚಿಕಿತ್ಸಾ ವಿಧಾನ. ತಾಳ್ಮೆ ಮತ್ತು ಏಕಾಗ್ರತೆಯೊಂದಿಗೆ ಪ್ರತಿದಿನ ದಿನ ನಾವು ನಾವೆ ಅಕ್ಯೂಪ್ರೆಶರ್ ಮತ್ತು ಸುಜೋಕ ಥೆರಪಿಯನ್ನು ಮಾಡಿಸಿಕೊಂಡಲ್ಲಿ ನಮ್ಮಲ್ಲಿ ರೋಗನಿರೋಧಕ ಶಕ್ತಿ ವರ್ಧನೆಯಾಗುವುದರ ಜೊತೆಯಲ್ಲಿ ಯಾವುದೇ ರೋಗ ರುಜಿನಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬಿನ ಪ್ರಧಾನ ಕಾರ‍್ಯದರ್ಶಿ ಅಶುತೋಷ್ ಕುಮಾರ್ ರಾಯ್, ರೋಟರಿ ಕ್ಲಬಿನ ನಿಕಟಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ, ರೊಟರಿ ಕ್ಲಬಿನ ಸಮುದಾಯ ಸೇವೆ ವಿಭಾಗದ ನಿರ್ದೇಶಕರಾದ ಆರ್.ಪಿ.ನಾಯ್ಕ, ರೊಟರಿ ಕ್ಲಬಿನ ಇವೆಂಟ್ ಚೇರಮೆನ್ ಲಿಯೋ ಪಿಂಟೋ, ಡಾ.ರಾಮ ಮನೋಹರ್ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನ್ ಇಲ್ಲಿಯ ಪ್ರಕಾಶ್ ಜಾಖಡ, ಆಕಾಶ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು.
ಆಕ್ಯೂಪ್ರೆಶರ್ ಮತ್ತು ಸುಜೋಕ ಥೆರಪಿ ಚಿಕಿತ್ಸೆ ಇಂದಿನಿಂದ ಆ:06 ರವರೆಗೆ ಈ ಶಿಬಿರ ನಡೆಯಲಿದೆ. ಶಿಬಿರದಲ್ಲಿ ನಗರದ ಸಾರ್ವಜನಿಕರು ಭಾಗವಹಿಸುತ್ತಿದ್ದಾರೆ.