ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದಾಗಿ ಮನೆ ಬಿದ್ದು ಹಾನಿಯಾದ ಸ್ಥಳಗಳಿಗೆ ಶಾಸಕ ಭೀಮಣ್ಣ ನಾಯ್ಕ ಭೇಟಿಯಾಗಿ, ಸಂತ್ರಸ್ಥರಿಗೆ ಧೈರ್ಯ ತುಂಬುವ ಜತೆಗೆ ಸರ್ಕಾರದ ಪರಿಹಾರ ಹಾಗೂ ವೈಯಕ್ತಿಕ ಸಹಾಯ ಒದಗಿಸಿದರು.
ಹಾರ್ಸಿಕಟ್ಟಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಟ್ಟಳ್ಳಿಯ ಮಹಾಲಕ್ಷ್ಮೀ ನಾರಾಯಣ ನಾಯ್ಕ ಇವರ ವಾಸದ ಮನೆ ಗುರುವಾರ ಕುಸಿದು ಬಿದಿದ್ದು ಅದೃಷ್ಟವಶಾತ್ ಮನೆಯಲ್ಲಿ ಯಾರು ಇರಲಿಲ್ಲ. ಇರುವ ನೆಲಸಮವಾಗಿರುವುದರಿಂದ ಮಹಾಲಕ್ಷ್ಮೀ ಹಾಗೂ ಆಕೆಯ ಮಕ್ಕಳಿಗೆ ಹಳಿಯಾಳ ಸರ್ಕಾರಿ ಪ್ರಾಥಮಿಕ ಶಾಲೆ ಪಕ್ಕದ ಅಂಗನವಾಡಿಯ ಹಳೆಯ ಕಟ್ಟಡದಲ್ಲಿ ಆಶ್ರಯ ನೀಡಲಾಗಿದ್ದು, ಶಾಸಕ ಭೀಮಣ್ಣ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ಥೆಯ ಭೇಟಿ ಮಾಡಿ ಧೈರ್ಯ ತುಂಬುವುದರ ಜತೆಗೆ ಸರ್ಕಾರದ 1.20 ಲಕ್ಷದ ಪರಿಹಾರ ವಿತರಿಸುವುದರ ಜತೆಗೆ ವೈಯಕ್ತಿಕವಾಗಿ ಸಹಾಯಧನ ನೀಡಿದರು. ನಂತರ ಹಾರ್ಸಿಕಟ್ಟಾದ ಅಂಗವಿಕಲ ಶುಕೂರ ಸಾಬ್ ಇವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ಸರ್ಕಾರದ ಸೌಲಭ್ಯ ಒದಗಿಸಲು ಸಂಬ0ಧಪಟ್ಟವರಿಗೆ ಸೂಚನೆ ನೀಡಿ ವೈಯಕ್ತಿಕ ನೆರವು ನೀಡಿದರು.
ತದನಂತರ ಹೊನ್ನೆಹದ್ದದ ಮಂಜಿ ಚೆನ್ನಯ್ಯ ಇವರ ಮನೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವೈಯಕ್ತಿಕ ಸಹಾಯ ನೀಡಿದರು. ಅಲ್ಲಿಂದ ಮಾದ್ಲಮನೆಯ ಯಶವಂತ ನಾಯ್ಕ ಇವರ ಮನೆಗೆ ತೆರಳಿ ಅಂಗವೈಕಲ್ಯಕ್ಕೆ ಒಳಗಾದವರ ಯೋಗಕ್ಷೇಮ ವಿಚಾರಿಸಿ ವೈಯಕ್ತಿಕ ಧನಸಹಾಯ ನೀಡಿದರು.
ಈ ವೇಳೆ ಭೀಮಣ್ಣ ನಾಯ್ಕ ಮಾತನಾಡಿ, ನಾನು ಒಂದು ಪಕ್ಷದ ಚಿಹ್ಮೆಯಡಿ ಚುನಾವಣೆಯಲ್ಲಿ ಗೆದ್ದು ಬಂದಿದ್ದೇನೆ. ಗೆದ್ದ ನಂತರ ನಾನು ಈ ಕ್ಷೇತ್ರದ ಎಲ್ಲಾ ಜನತೆಯ ಪ್ರತಿನಿಧಿಯಾಗಿದ್ದೇನೆ. ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಕೆಲಸ ಮಾಡುತ್ತೇನೆ. ಎಲ್ಲಾ ಸಮುದಾಯದ ಜನತೆಯ ಹಿತ ಕಾಪಾಡುವುದು ನನ್ನ ಆದ್ಯ ಕರ್ತವ್ಯವಾಗಿದ್ದು, ತಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು.
ಈ ವೇಳೆ ತಾಲೂಕಾ ದಂಡಾಧಿಕಾರಿ ಮಂಜುನಾಥ ಮುನ್ನೊಳ್ಳಿ, ಹಾರ್ಸಿಕಟ್ಟಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿದ್ಯಾ ನಾಯ್ಕ, ಸದಸ್ಯ ಅಶೋಕ ನಾಯ್ಕ, ಪಿಡಿಓ ರಾಜೇಶ ನಾಯ್ಕ, ಗ್ರಾಮ ಲೆಕ್ಕಾಧಿಕಾರಿಗಳಾದ ವಿಜಯಕುಮಾರ, ಹೇಮಾವತಿ ಎಚ್.ಕೆ., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಪಕ್ಷದ ಪ್ರಮುಖರಾದ ಕೆ.ಜಿ.ನಾಗರಾಜ, ಅಬ್ದುಲ್ಲಾ ಹೆರೂರ, ಸೀಮಾ ಹೆಗಡೆ, ಎನ್.ಟಿ.ನಾಯ್ಕ, ಪಾಂಡುರoಗ ನಾಯ್ಕ, ಅಣ್ಣಪ್ಪ ಶಿರಳಗಿ, ಮಂಜುನಾಥ ನಾಯ್ಕ ತ್ಯಾರ್ಸಿ, ಬಾಲಕೃಷ್ಣ ನಾಯ್ಕ, ಎಸ್.ಆರ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.