ಅಂಕೋಲಾ: ನೌಕರರ ಹಿತಕಾಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ, ಜಿಲ್ಲಾ, ತಾಲೂಕು ಘಟಕಗಳ ವಿರುದ್ಧ ಆಧಾರ ರಹಿತವಾಗಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಒತ್ತಾಯಿಸಿದೆ.
ಗುರುವಾರ ಮನವಿ ಸಲ್ಲಿಸಿದ ಸಂಘಟನೆಯ ಪ್ರಮುಖರು, ಸಂಘಟನೆಯ ವಿರುದ್ಧ ಸುಳ್ಳು ಆರೋಪ ಮಾಡಿರುವ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಸಂಘಟನೆಯನ್ನು ದುಬರ್ಲಗೊಳಿಸುವ ದುರುದ್ದೇಶದಿಂದ ವಿವಿಧ ಇಲಾಖೆಯ ಕೆಲ ಅಧಿಕಾರಿಗಳು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿರುವುದೂ ಅಲ್ಲದೇ ದೂರಿನ ಪ್ರತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಂಘಟನೆಯ ಘನತೆಗೆ ಮಸಿ ಬಳಿಯುವ ಕೆಲಸ ಮಾಡುವುದು ವಿಷಾದನೀಯ. ಸಂಘಟನೆ ಹಾಗೂ ಪದಾಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡಿರುವ ವಿವಿಧ ಇಲಾಖೆಯ ಐವರು ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ವೇಳೆ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ಕಾರ್ಯದರ್ಶಿ ಗಣಪತಿ ನಾಯ್ಕ, ರಾಜ್ಯ ಪರಿಷತ್ ಸದಸ್ಯ ಜಗದೀಶ ಜಿ.ನಾಯಕ ಹೊಸ್ಕೇರಿ, ಖಜಾಂಚಿ ಗಿರೀಶ ನಾಯಕ, ಉಪಾಧ್ಯಕ್ಷರಾದ ಪ್ರಮೋದ ದೊಡ್ಮನೆ, ಕೃಷ್ಣಮೂರ್ತಿ ಮೇಗಲಮನೆ ಪದಾಧಿಕಾರಿಗಳಾದ ರಫೀಕ್ ಶೇಖ್, ರವಿ ಕೋಟೆಬಾವಿ ಮುಂತಾದವರಿದ್ದರು..