ಯಲ್ಲಾಪುರ: ಇಲ್ಲಿನ ತಾಲೂಕು ಆಸ್ಪತ್ರೆಯ ನೇತ್ರ ವಿಭಾಗದಿಂದ ಪಟ್ಟಣದ ವೈ.ಟಿ.ಎಸ್.ಎಸ್ ಪ್ರೌಢಶಾಲೆಯಲ್ಲಿ ನಡೆದ ಕಣ್ಣು ಬೇನೆ ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ಕಣ್ಣು ಬೇನೆ ನಿಯಂತ್ರಣದ ಕುರಿತು ಮಾಹಿತಿ ನೀಡಲಾಯಿತು.
ಯಲ್ಲಾಪುರ ತಾಲೂಕು ಆಸ್ಪತ್ರೆಯ ನೇತ್ರ ತಜ್ಞೆ ಡಾ ಸೌಮ್ಯ ಕೆ.ವಿ ಮಾತನಾಡಿ, ಕಳೆದೊಂದು ವಾರದಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗವನ್ನೂ ಒಳಗೊಂಡಂತೆ ಕಣ್ಣು ಬೇನೆ/ಕಂಜಂಕ್ಷೆವೈಟಿಸ್/ ಮದ್ರಾಸ್ ಕಣ್ಣು ಇತ್ಯಾದಿಯಾಗಿ ಕರೆಯಲ್ಪಡುವ ಕಣ್ಣಿನ ಸೋಂಕು ಹರಡುತ್ತಿದೆ. ವಾತಾವರಣದ ವೈಪರೀತ್ಯ, ಅತಿಯಾದ ಮಳೆ ಹಾಗೂ ಹೆಚ್ಚಿನ ತೇವಾಂಶದಿಂದ ವೈರಾಣುಗಳು ಹೆಚ್ಚುತ್ತಿರುವದರಿಂದ ಈ ಸಾಂಕ್ರಾಮಿಕ ಕಾಯಿಲೆ ಅಧಿಕಗೊಳ್ಳುತ್ತಿದೆ. ಸೋಂಕಿತರು ಬಳಸಿದ ವಸ್ತುಗಳನ್ನು ಮುಟ್ಟಿ ಕಣ್ಣು ಮುಟ್ಟಿಕೊಂಡಾಗ ಸಾಮಾನ್ಯವಾಗಿ ಈ ರೋಗ ಹರಡುತ್ತದೆ.
ಡ್ರಾಪ್ಲೆಟ್ ಅಥವಾ ಉಸಿರಿನ ಕಣಗಳಿಂದಲೂ ಹರಡಬಹುದು. ಕಣ್ಣು ಕೆಂಪಾಗುವುದು, ನೀರು ಸುರಿಯುವುದು, ಪಿಚ್ಚು ಬರುವುದು, ಊದಿಕೊಳ್ಳುವುದು, ಕಸ ಚುಚ್ಚಿದಂತಾಗುವುದು ಈ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತವೆ. 3-5 ದಿನಗಳಲ್ಲಿ ಕಡಿಮೆಯಾಗುತ್ತದೆ. ದೃಷ್ಟಿಗೆ ಯಾವುದೇ ದೀರ್ಘಕಾಲದ ತೊಂದರೆ ಆಗುವುದಿಲ್ಲ. ಈ ಕುರಿತು ಭಯ ಬೇಡ. ಆದರೆ ಸೋಂಕು ಹರಡುವ ಪ್ರಮಾಣ ಹೆಚ್ಚಿರುವುದರಿಂದ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಅಗತ್ಯ. ಕೆಲವರಿಗೆ ನೆಗಡಿ, ಜ್ವರ, ಮೈ ಕೈ ನೋವು ಕಾಣಿಸಿಕೊಳ್ಳಬಹುದು. ವೈದ್ಯರ ಸಲಹೆಯ ಮೇರೆಗೆ ಔಷಧಗಳನ್ನು ಬಳಸಬೇಕು.
ಶಾಲೆ, ಕಾಲೇಜುಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ಸೋಂಕು ಕಂಡು ಬಂದವರು ಲಕ್ಷಣಗಳು ಕಡಿಮೆ ಆಗುವವರೆಗೆ ವಿರಾಮ ಪಡೆಯಬೇಕು. ಪದೇ ಪದೇ ಕೈ ತೊಳೆದುಕೊಳ್ಳುವುದು, ಸ್ವಚ್ಚತೆ ಹಾಗೂ ಸಾಮಾಜಿಕ ಅಂತರ ಕಾದು ಕೊಳ್ಳುವುದು, ಕಣ್ಣು- ಮುಖ ಮುಟ್ಟಿ ಕೊಳ್ಳದೇ ಇರುವುದು, ಮಾಸ್ಕ್ ಹಾಗೂ ಕನ್ನಡಕ ಧರಿಸುವುದು, ಜನನಿಬಿಡ ಪ್ರದೇಶಗಳಿಂದ ದೂರವಿರುವುದು ಇಂತಹ ಮುಂಜಾಗರೂಕತಾ ಕ್ರಮಗಳು ಈ ಸಮಯದಲ್ಲಿ ಅವಶ್ಯಕ.
ಸೋಂಕಿತರು ಟವೆಲ್, ದಿಂಬು, ಮೇಕಪ್ ಕಿಟ್ ಪ್ರತ್ಯೇಕವಾಗಿ ಇಟ್ಟುಕೊಳ್ಳುವುದರಿಂದ ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡದೇ ಇರುವುದರಿಂದ ಬೇರೆಯವರಿಗೆ ಹರಡುವುದನ್ನು ತಪ್ಪಿಸಬಹುದು ಎಂದರು.
ನೇತ್ರಾಧಿಕಾರಿ ಪರ್ವಿನಬಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುನೀತಾ ನಾಯ್ಕ ಕಾರ್ಯಕ್ರಮ ಆಯೋಜಿಸಲು ಸಹಕರಿಸಿದರು. ಪ್ರೌಢಶಾಲೆಯ ಮುಖ್ಯಾಧ್ಯಾಪಕರು ಹಾಗೂ ಅಧ್ಯಾಪಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.